ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೇ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಸಿದ್ಧರಾಗಿದ್ದರು. ಆದರೆ ಅವರ ಆರೋಗ್ಯ ಹದಗೆಡುತ್ತಿದೆ. ಜತೆಗೆ ಟ್ರಂಪ್ನಿಂದ ಎದುರಿಸುತ್ತಿರುವ ಕಠಿಣ ಸವಾಲಿನಿಂದಾಗಿ ಅನೇಕ ಡೆಮಾಕ್ರೆಟಿಕ್ ನಾಯಕರು ಅವರನ್ನು ಚುನಾವಣಾ ಕಣದಿಂದ ಹೊರಗಿಡುವಂತೆ ಸೂಚಿಸಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಹಲ್ಲೆ ನಂತರ ಬೈಡನ್ ಆಡಳಿತದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆ. ಟ್ರಂಪ್ಗೆ ದೇಶದ ಬೆಂಬಲ ಹಾಗೂ ಸಹಾನುಭೂತಿ ಸಿಗುತ್ತಿದೆ. ವರದಿಗಳ ಪ್ರಕಾರ, ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಭಾವಿಸಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಚಕ್ ಶುಮರ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಉನ್ನತ ನಾಯಕರು ಬೈಡನ್ ಅವರನ್ನು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದಾರೆ ಜೋ ಬೈಡನ್. ಹೀಗಾಗಿ ಹಾಲಿ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಬೈಡೆನ್ ಬದಲಾಗಿ ಡೆಮಾಕ್ರೆಟ್ ಪಕ್ಷದ ಅಭ್ಯ ರ್ಥಿಯಾಗಿ ಕಮಲಾ ಹ್ಯಾರಿಸ್ ಕಣಕ್ಕೆ ಇಳಿ ಯುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಇದು ಖಚಿತವಾದರೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ ಎರಡನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ. ಜೊತೆಗೆ ಒಂದು ವೇಳೆ ಆಯ್ಕೆಯಾದರೆ, ಮೊದಲ ಮಹಿಳೆ ಮತ್ತು ಅಮೆರಿಕದ ಅಧ್ಯಕ್ಷೆಯಾದ ಭಾರತ ಮೂಲದ ಮಹಿಳೆ ಎಂಬ ಹಿರಿಮೆಯೂ ಕಮಲಾಗೆ ಒಲಿಯಲಿದೆ.