ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಅಬ್ಬರ ನವೆಂಬರ್ 5ರಂದು ನಡೆಯಲಿದೆ. 74 ವರ್ಷದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಸಡ್ಡು ಹೊಡೆದಿದ್ದಾರೆ. ಟ್ರಂಪ್ ಗೆಲ್ತಾರಾ ಅಥವಾ ಕಮಲಾ ಗೆದ್ದು, ಅಮೆರಿಕದ ಅಧ್ಯಕ್ಷೆ ಆದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನ್ನಿಸಿಕೊಳ್ಳುತ್ತಾರಾ ಎಂಬ ಬಗ್ಗೆ ಕುತೂಹಲವಿದೆ. ಹೀಗಾಗಿ ಜಗತ್ತು, ಅದರಲ್ಲೂ ವಿಶೇಷವಾಗಿ ಭಾರತ ಈ ಚುನಾವಣೆಯ ಬಗ್ಗೆ ಗಮನಹರಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದರ ಬಗ್ಗೆ ನಾವು ನೋಡೋಣ..
50 ರಾಜ್ಯಗಳು, 538 ಜನಪ್ರತಿನಿಧಿಗಳು, 24 ಕೋಟಿ ಮತದಾರರು.
ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆಮಾಡುತ್ತವೆ. ರಾಜ್ಯದ ಜನ ಆಯಾ ಪಕ್ಷದ ಅಭ್ಯರ್ಥಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತಚಲಾಯಿಸುತ್ತಾರೆ. ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿದ್ದು, ಒಟ್ಟು 538 ಮಂದಿ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಸೇರುತ್ತವೆ. ಪ್ರತಿಸ್ಪರ್ಧಿಗೆ ಶೂನ್ಯ ಮತ ಲಭಿಸುತ್ತವೆ.
ಒಹಾಯೋ ರಾಜ್ಯ ಗೆದ್ದವರಿಗೆ ಅಮೆರಿಕ ಅಧ್ಯಕ್ಷ ಪಟ್ಟ ಪಕ್ಕಾ!
ಅಮೆರಿಕದಲ್ಲಿ ಒಹಾಯೋ ಸೇರಿದಂತೆ 7 ಮಹತ್ವದ ರಾಜ್ಯಗಳಿವೆ. ಕಡೆಯ ಕೆಲವು ವಾರಗಳಲ್ಲಿ ಈ ರಾಜ್ಯಗಳತ್ತಲೇ ಸ್ಪರ್ಧಿಗಳ ಗಮನ ಇರುತ್ತದೆ. ಅಲ್ಲಿಯೇ ಇವರ ಪ್ರಚಾರಕ್ಕೆ ಒತ್ತು ನೀಡಲಾಗುತ್ತದೆ. ಇದುವರೆಗೂ ಒಂದು ಬಾರಿ ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲೂ ಒಹಾಯೋದಲ್ಲಿ ಮುನ್ನಡೆ ಸಾಧಿಸಿದವರಿಗೇ ಅಧ್ಯಕ್ಷ ಪಟ್ಟ ಸಿಕ್ಕಿದೆ.
ಚುನಾವಣೆ ಪ್ರಕ್ರಿಯೆ ಹೇಗೆ?
ಅಮೆರಿಕನ್ನರು ನೇರವಾಗಿ ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ ಅಮೆರಿಕದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಪಕ್ಷ ಎಂಬ ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು ಎಲೆಕ್ಟೋರಲ್ ಕಾಲೇಜುಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಮತದಾರರು ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಆಯ್ಕೆಯಾದಂತಹ ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ.
ಪ್ರತಿ 4 ವರ್ಷಕ್ಕೊಮ್ಮೆ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರತಿ 4 ವರ್ಷಗಳಿಗೊಮ್ಮೆ ಸಾಮಾನ್ಯವಾಗಿ ನವೆಂಬರ್ ಮೊದಲ ಸೋಮವಾರದ ಮಾರನೇ ದಿನ ಅಂದರೆ ಮಂಗಳವಾರ ನಡೆಯುತ್ತದೆ. 1845ರಿಂದಲೂ ಅಮೆರಿಕ ಸಂಸತ್ತು ಈ ನಿಯಮ ಪಾಲಿಸಿಕೊಂಡು ಬರುತ್ತಿದೆ. ಜನರು ಇ-ಮೇಲ್ ಮೂಲಕ ಮತ ಚಲಾಯಿಸಲೂ ಅವಕಾಶವಿದೆ.
ಮತದಾನ ಹೇಗೆ ನಡೆಯುತ್ತದೆ?
ಈವರೆಗೆ ಬ್ಯಾಲಟ್ ಬಾಕಿಗೆ ತಮ್ಮ ಮೇಲ್ ಕಳಿಸಿರದ ಮತದಾರರು ನವೆಂಬರ್ 5ರಂದು ತಮ್ಮ ಅಧ್ಯಕ್ಷನ ಆಯ್ಕೆಗೆ ಮತ ಚಲಾಯಿಸಲು ಮತಪಟ್ಟಿಗೆಯತ್ತ ಬರುತ್ತಾರೆ. ಮತದಾನ ಮುಗಿದ 12 ತಾಸಿನೊಳಗೆ ಮುಂದಿನ ಅಧ್ಯಕ್ಷರಾರು ಎಂಬುದು ಸ್ಪಷ್ಟವಾಗತೊಡಗುತ್ತದೆ. ರಾಜ್ಯಗಳಲ್ಲಿ ಬಹುಮತ ಪಡೆದರೆ ಸಾರ್ವಜನಿಕರ ಲೆಕ್ಕದಲ್ಲಿ ಅಧ್ಯಕ್ಷೀಯ ಚುನಾವಣೆ ಮುಗಿದಂತೆಯೇ. ಎಲೆಕ್ಟೋರಲ್ ಕಾಲೇಜ್ ಪ್ರತಿನಿಧಿಗಳು ತಮ್ಮ ಪಕ್ಷ ಹೇಳಿದ ಅಥವಾ ಗೆಲ್ಲುವ ಅಭ್ಯರ್ಥಿಗೇ ಮತ ಹಾಕಬೇಕೆಂಬ ನಿಯಮವೇನೂ ಇಲ್ಲ. ಆದರೆ ತಮ್ಮದೇ ಪಕ್ಷದ ಅಭ್ಯರ್ಥಿಗೆ ಮತ ಹಾಕದಿರುವ ಘಟನೆಗಳು ತೀರಾ ಅಪರೂಪ. ನವೆಂಬರ್ 5ಕ್ಕೆ ಮತದಾನ ನಡೆದರೆ ಡಿ.10ರ ಒಳಗಾಗಿ ಮತ ಎಣಿಕೆಯನ್ನು ಪೂರ್ಣಗೊಳಿಸಬೇಕು. ಆಯ್ಕೆಯಾದ ಜನಪ್ರತಿನಿಧಿಗಳು ಅದಾದ 1 ವಾರದ ಬಳಿಕ ಅಧ್ಯಕೀಯ ಅಭ್ಯರ್ಥಿಯನ್ನು ಆಯ್ಕೆಮಾಡುತ್ತಾರೆ. ಅಂತಿಮವಾಗಿ ಈ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷ ಅಭ್ಯರ್ಥಿ ಮುಂದಿನ ವರ್ಷ ಅಂದರೆ 2025ರ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.