ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರ ಹರಿಯಾಣ ಹಾಗೂ ಇತರ ರಾಜ್ಯಗಳ ಮಾದರಿಯಲ್ಲಿಯೇ ರಾಜ್ಯದಲ್ಲಿ ಹೊಸ ಅಬಕಾರಿ ನೀತಿಯನ್ನು ಪರಿಚಯಿಸಲು ಹೊರಟಿದೆ. ಈ ಮೂಲಕ 5,500 ಕೋಟಿ ರೂಪಾಯಿ ಆದಾಯದ ಗುರಿಯಿಟ್ಟುಕೊಂಡಿದೆ. ಹಲವು ರಾಜ್ಯಗಳ ಅಬಕಾರಿ ನೀತಿಯನ್ನು ಮಾದರಿಯಾಗಿಟ್ಟುಕೊಂಡು ಅಕ್ಟೋಬರ್ 12 ರಿಂದ ಜಾರಿಯಾಗುವಂತೆ ಹೊಸ ಅಬಕಾರಿ ನೀತಿಯನ್ನು ತರಲು ನಾಯ್ಡು ಸರ್ಕಾರ ಸಿದ್ಧವಾಗಿದೆ. 3736 ರಿಟೇಲ್ ಆಲ್ಕೋಹಾಲ್ ಮಾರಾಟಗಾರರಿಗೆ ಈಗಾಗಲೇ ಸೂಚನೆ ನೀಡಿದ್ದು. ಅವುಗಳನ್ನು ಖಾಸಗೀಕರಣಗೊಳಿಸಿ ಕೈಗೆಟುಕುವ ದರದಲ್ಲಿ ಲಿಕ್ಕರ್ ಸಿಗುವಂತೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಈ ಒಂದು ಹೊಸ ನೀತಿಯಿಂದಾಗಿ ಕಡಿಮೆ ಆದಾಯ ಇರುವ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಕೈಗೆಟುಕುವ ದರದಲ್ಲಿ ಮದ್ಯ ಸಿಗುವಂತೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕೆ ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆಂಧ್ರಪ್ರದೇಶ ಸರ್ಕಾರ 99 ರೂಪಾಯಿಗೆ ಒಂದು ಕ್ವಾರ್ಟರ್ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಸಿಗುವ ಮದ್ಯದ ಬ್ರ್ಯಾಂಡ್ನ್ನು ಸದ್ಯದಲ್ಲಿಯೇ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಮಾದರಿಯ ಮದ್ಯವನ್ನು ಮಾರುಕಟ್ಟೆಗೆ ತರಲು ರಾಷ್ಟ್ರೀಯ ಮದ್ಯ ಪೂರೈಕೆದಾರರಿಗೆ ಸರ್ಕಾರ ಮನವಿ ಮಾಡಿಕೊಂಡಿದೆ.
ಕಳೆದ ಐದು ವರ್ಷಗಳಲ್ಲಿ ಕುಸಿದು ಬಿದ್ದಿರುವ ಮದ್ಯ ಮಾರುಕಟ್ಟೆಯನ್ನು ಮೇಲೆತ್ತಲು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಮದ್ಯ ಮಾರಾಟದ ಆದಾಯದಲ್ಲಿ ದೇಶದ ಟಾಪ್ ಮೂರರಲ್ಲಿ ರಾಜ್ಯವನ್ನು ತೆಗೆದುಕೊಂಡು ಹೋಗಲು ಸರ್ಕಾರ ಬದ್ಧವಾಗಿದ್ದು ಆ ಕಾರಣಕ್ಕಾಗಿ ಈ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.
ಕಳೆದ ಐದು ವರ್ಷಗಳಲ್ಲಿ ನಿರಂತರ ಬೆಲೆ ಏರಿಕೆಯಿಂದಾಗಿ ಆಂಧ್ರಪ್ರದೇಶದ ಮದ್ಯ ಮಾರುಕಟ್ಟೆ ಭೀಕರವಾಗಿ ಕುಸಿತ ಕಂಡಿದೆ. ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಹಾಗೂ ನಿರೀಕ್ಷೆಯಿಟ್ಟಿದ್ದ ಮಟ್ಟದಲ್ಲಿ ಆದಾಯ ಹರಿದು ಬರುತ್ತಿಲ್ಲ. ಈ ಕಾರಣದಿಂದಾಗಿ ಹೊಸ ಅಬಕಾರಿ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತಂದು ವರ್ಷಕ್ಕೆ 5500 ಕೋಟಿ ರೂಪಾಯಿ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ತುಂಬುವುದು ನಾಯ್ಡು ಸರ್ಕಾರದ ಗುರಿಯಾಗಿದೆ. ಭಾರತದ ಬೀಯರ್ ಇಂಡಸ್ಟ್ರೀ ಕೂಡ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿದೆ. ಹೀಗಾಗಿ ಹೊಸ ಅಬಕಾರಿ ನೀತಿ ಮೂಲಕ ರಾಜ್ಯದ ಬೊಕ್ಕಸವನ್ನು ತುಂಬಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧಾರ ಮಾಡಿದೆ.