ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿರುವ ಆಂಧ್ರಪ್ರದೇಶದ ವಿಜಯವಾಡ ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಿಗೆ ಮತ್ತೊಂದು ಆತಂಕ ಎದುರಾಗಿದೆ. ನಗರದ ತಪ್ಪಲಿನಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಪ್ರಕಾಶಂ ಬ್ಯಾರೇಜ್ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಅದರ 69ನೇ ಗೇಟ್ ಹಾನಿಯಾಗಿದೆ. ಪರಿಣಾಮ 11.25 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಹೀಗಾಗಿ ಎನ್ಟಿಆರ್, ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಿಗೆ ಮತ್ತಷ್ಟು ಪ್ರವಾಹದ ಆತಂಕ ಮನೆಮಾಡಿದೆ. ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ನಿರ್ವಹಿಸಿದ್ದ ಕನ್ನಯ್ಯ ನಾಯ್ಡು ಅವರಿಗೆ ಇದರ ರಿಪೇರಿ ಹೊಣೆ ನೀಡಲಾಗಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪರಿಣಾಮ ನದಿಯಲ್ಲಿ ಕಾರ್ಯಾಚರಣೆ ನಡೆಸುವ ದೋಣಿಗಳನ್ನು ಕಟ್ಟಿಹಾಕಲಾಗಿತ್ತು. ಆದರೆ ನೀರಿನ ತೀವ್ರತೆ ತಡೆಯದ ಮೂರು ದೋಣಿಗಳು ಕಟ್ಟು ಬಿಡಿಸಿಕೊಂಡು 40 ಕಿಲೋಮೀಟರ್ ವೇಗದಲ್ಲಿ ಡ್ಯಾಂಗೆ ಅಪ್ಪಳಿಸಿದೆ. ಹೀಗಾಗಿ 69ನೇ ಗೇಟ್ ಭದ್ರತೆಗೆ ನಿರ್ಮಿಲಾಗಿದ್ದ ಕಾಂಕ್ರಿಟ್ ಪೀಠ ತೀವ್ರವಾಗಿ ಹಾನಿಯಾಗಿದೆ. ಇದರ ಅಪಾಯ ತಪ್ಪಿಸಲು ಬ್ಯಾರೇಜ್ಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ನದಿಯಿಂದ 11.25 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಕನ್ನಯ್ಯ ನಾಯ್ಡು ಅವರಿಗೆ ರಿಪೇರಿ ಹೊಣೆ: ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಮುರಿದುಹೋದಾಗ ಅದರ ರಿಪೇರಿಯನ್ನು ಇದೇ ಕನ್ನಯ್ಯ ನಾಯ್ಡು ಅವರಿಗೆ ನೀಡಲಾಗಿತ್ತು. ಈಗ ಪ್ರಕಾಶಂ ಬ್ಯಾರೇಜ್ ರಿಪೇರಿ ಹೊಣೆಯನ್ನು ಇವರಿಗೆ ವಹಿಸಲಾಗಿದೆ.