ಎಐ ಸೃಷ್ಟಿಸೋ ಅವಾಂತರಗಳು ಒಂದೆರಡಲ್ಲ.. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನ ಒಳ್ಳೆಯದಕ್ಕೂ ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು. ಆದ್ರೆ, ಕೆಲವು ಕಿಡಿಗೇಡಿಗಳು ಸೆಲಬ್ರಿಟಿಗಳ ಖಾಸಗಿ ಬದುಕನ್ನೇ ಬೀದಿಗೆ ತರೋ ಕೆಲಸ ಮಾಡ್ತಿದ್ದಾರೆ.. ಈ ಡೀಪ್ ಫೇಕ್ ಹಾವಳಿಗೆ ಯಾರೆಲ್ಲಾ ಬಲಿಪಶು ಆಗಿದ್ದಾರೆ ಗೊತ್ತಾ?
ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ ಬಳಸಿಕೊಂಡು ಮಾಡುವ ಅವಾಂತರಗಳು ಒಂದೆರಡಲ್ಲ! ಈ ಸಾಲಿಗೆ ಇದೀಗ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಮೊಹಮ್ಮದ್ ಶಮಿ ಕೂಡಾ ಬಲಿಪಶುವಾಗಿದ್ದಾರೆ. ಈ ಹಿಂದೆ ಪ್ರಭಾಸ್-ಅನುಷ್ಕಾಗೆ ಮದುವೆ ಮಾಡಿಸಿದ್ದ ಆನ್ ಲೈನ್ ಕಿಡಿಗೇಡಿಗಳು, ಇದೀಗ ಸಾನಿಯಾ ಹಾಗೂ ಶಮಿಗೆ ಶಾಕ್ ಕೊಟ್ಟಿದ್ಧಾರೆ. ರಶ್ಮಿಕಾ ಮಂದಣ್ಣ ಕೂಡಾ ಇದೇ ರೀತಿಯ ಡೀಪ್ ಫೇಕ್ ಗೆ ಬಲಿಪಶುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ..
ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ಅವರನ್ನ ಮದುವೆಯಾಗಿದ್ದ ಸಾನಿಯಾ ಮಿರ್ಜಾ, ಇತ್ತೀಚೆಗೆ ಡೈವೋರ್ಸ್ ಪಡೆದಿದ್ದರು. ಇನ್ನು ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಕೂಡಾ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಇದೀಗ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ವಿವಾಹ ಆಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಕೇವಲ ಸುದ್ದಿ ಮಾತ್ರವಲ್ಲ, ಇಬ್ಬರೂ ಜೊತೆಯಾಗಿರುವ ಫೋಟೋಗಳೂ ಹರಿದಾಡುತ್ತಿವೆ..
ಸಾನಿಯಾ ಹಾಗೂ ಶಮಿ ದುಬೈನಲ್ಲಿ ಕ್ರಿಸ್ ಮಸ್ ಆಚರಿಸಿಕೊಂಡಿದ್ದಾರೆ. ಬಳಿಕ ಅವರು ವಿವಾಹವಾಗಿದ್ದಾರೆ, ಅವರ ಮೊದಲ ರಾತ್ರಿಯೂ ನಡೆದಿದೆ.. ಹಲವು ದೇಶಗಳಲ್ಲಿ ಮೋಜು – ಮಸ್ತಿ ಮಾಡ್ತಿದ್ದಾರೆ.. ಹೀಗೆ ಲೆಕ್ಕವಿಲ್ಲದಷ್ಟು ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತಿದೆ. ವಿಪರ್ಯಾಸ ಅಂದ್ರೆ ಇದ್ಯಾವುದೂ ಸತ್ಯವಲ್ಲ!
ಕೃತಕ ಬುದ್ದಿಮತ್ತೆ ಎಐ ಬಳಸಿಕೊಂಡು ಮಾಡಿರುವ ಅವಾಂತರ ಇದು! ಈ ಫೋಟೋಗಳು ಕೇವಲ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಮಾತ್ರವಲ್ಲ, ಇಡೀ ಕ್ರೀಡಾ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಎಷ್ಟೋ ಜನ ಈ ಜೋಡಿ ವಿವಾಹವಾದ್ರು ಅಂತಾನೇ ನಂಬಿ ಬಿಟ್ಟಿದ್ದರಂತೆ! ಬಳಿಕ ಎರಡೂ ಕಡೆಯಿಂದ ಸ್ಪಷ್ಟನೆಗಳು ಬಂದ ನಂತರ ಇದೊಂದು ಸುಳ್ಳು ಸುದ್ದಿ ಅನ್ನೋದು ಸಾಬೀತಾಗಿದೆ. ಹಾಗೆ ನೋಡಿದ್ರೆ ಈ ರೀತಿಯ ಫೇಕ್ ಎಐ ಫೋಟೋಗಳ ಹಾವಳಿ ಇದೇ ಮೊದಲಲ್ಲ! ಈ ಹಿಂದೆ ಪ್ರಭಾಸ್ ಅನುಷ್ಕಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಫೋಟೋಗಳೂ ಹಾವಳಿ ಇಟ್ಟಿದ್ದವು.
ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ ಮದುವೆಯಾಗಿದ್ದಾರೆ ಅನ್ನೋ ಡೀಫ್ ಫೇಕ್ ಫೋಟೋಗಳು ಭಾರೀ ಸದ್ದು ಮಾಡಿದ್ದವು. ಇತ್ತ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಬಳಸಿಕೊಂಡು ಬೇರೊಬ್ಬ ಮಹಿಳೆಯ ದೇಹಕ್ಕೆ ಅಂಟಿಸಿ ಡೀಪ್ ಫೇಕ್ ವಿಡಿಯೋ ಸೃಷ್ಟಿಸಲಾಗಿತ್ತು. ಇದು ಕೇವಲ ಸಿನಿಮಾ ರಂಗಕ್ಕೆ ಮಾತ್ರವಲ್ಲ, ಖುದ್ದು ಪ್ರಧಾನಿ ಮೋದಿಯವರೇ ತಾವೂ ಕೂಡಾ ಡೀಪ್ ಫೇಕ್ ಹಾವಳಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದರು..
ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ.. ಪ್ರತ್ಯಕ್ಷವಾಗಿ ಕಂಡರೂ ಪರಾಮರ್ಶಿಸಿ ನೋಡು ಅನ್ನೋ ಮಾತು ಈ ರೀತಿಯ ಎಲ್ಲಾ ಘಟನೆಗಳಿಗೆ ಸೂಕ್ತವಾಗಿ ಅನ್ವಯಿಸುತ್ತದೆ..