ಬೆಂಗಳೂರು: ಕಲ್ಯಾಣ ಕರ್ನಾಟಕದ ಭಾಲ್ಕಿಯ ಗುತ್ತಿಗೆದಾರ ಸಚಿನ್ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ಮಾಡಿಸಬೇಕು. ಸತ್ಯಾಸತ್ಯತೆ ಹೊರಬರಬೇಕಿದೆ. ಈ ವಿಷಯದಲ್ಲಿ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆಯನ್ನು ಸಿದ್ದರಾಮಯ್ಯನವರು ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನ್ಯಾಯಾಂಗ ತನಿಖೆ, ಸಚಿವರ ರಾಜೀನಾಮೆ ಪಡೆಯದೆ ಇದ್ದರೆ ಬಿಜೆಪಿ ಇದರ ಬಗ್ಗೆ ಪ್ರಬಲ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಇವತ್ತು ಸಚಿನ್ ಎಂಬ ಭಾಲ್ಕಿಯ ಯುವ ಗುತ್ತಿಗೆದಾರ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಕಾರಣರನ್ನೂ ಅವರು ಹೆಸರಿಸಿದ್ದಾರೆ. ಮಾಜಿ ಕಾರ್ಪೊರೇಟರ್ ರಾಜು ಕಪನೂರು ಮತ್ತು ಇತರರ ಹೆಸರನ್ನು ಅವರು ಬರೆದಿಟ್ಟಿದ್ದಾರೆ ಎಂದು ವಿವರ ನೀಡಿದರು.
ಎಲ್ಲ ವಿಷಯಕ್ಕೂ ಮೂಗು ತೂರಿಸಿ ಮಾತನಾಡುವ ಹಾಗೂ ನೈತಿಕತೆ ಕುರಿತು ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಸಚಿನ್ ಸಾವಿನ ಕುರಿತು ಕಾಂಗ್ರೆಸ್ಸಿನ ಮಹಾಧಿವೇಶನದಲ್ಲಿ ಜನರಿಗೆ ಉತ್ತರ ನೀಡಲಿ ಎಂದು ಅವರು ಒತ್ತಾಯಿಸಿದರು. ಪ್ರಿಯಾಂಕ್ ಖರ್ಗೆಯವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ; ಆದ್ದರಿಂದ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ಸಿದ್ದರಾಮಯ್ಯನವರ ಅಧಿಕಾರಾವಧಿಯ ಎರಡನೇ ಅವಧಿಯ ಒಂದು ವರ್ಷ 8 ತಿಂಗಳಿನಲ್ಲಿ 4 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಪ್ರಾರಂಭದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಬಳಿಕ ಪರಶುರಾಮ ನಾಯಕ್ ಎಂಬ ಪೊಲೀಸ್ ಅಧಿಕಾರಿ ಕಾಂಗ್ರೆಸ್ ಶಾಸಕ ಮತ್ತು ಅವರ ಮಗನ ದುಡ್ಡಿನ ಬೇಡಿಕೆ ಎಂದು ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ದ್ವಿತೀಯ ದರ್ಜೆ ನೌಕರ ರುದ್ರಣ್ಣ ಯಡವಣ್ಣವರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಪಿ.ಎ. ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿಸಿದರು.
ಇದಲ್ಲದೆ ರಾಮನಗರದಲ್ಲಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ತೊಂದರೆ ಕೊಡುವುದಾಗಿ ತಿಳಿಸಿ, ಒಬ್ಬ ಲಾರಿ ಮಾಲೀಕ ಇದೇ ಕಚೇರಿ ಮುಂದೆ ಮರಕ್ಕೆ ನೇಣು ಹಾಕಿಕೊಂಡ ನಿದರ್ಶನವೂ ಇದೆ ಎಂದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಆತ್ಮಹತ್ಯೆ, ಅನುಮಾನಾಸ್ಪದ ಸಾವುಗಳು, ಇಲ್ಲವೇ ಗುತ್ತಿಗೆದಾರರ ಸಾವುಗಳು ನಿರಂತರವಾಗಿ ನಡೆಯುತ್ತಿವೆ. ಮೊದಲನೇ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ರೈತರ ಆತ್ಮಹತ್ಯೆಗಳು ನಡೆದಿದ್ದವು ಎಂದು ತಿಳಿಸಿದರು.