ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯಿಂದ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಇದುವರೆಗೂ 38 ಮಂದಿ ಸಾವನ್ನಪ್ಪಿದ್ದು 11.34 ಲಕ್ಷ ಜನರು ಪ್ರವಾಹ ಸಂತ್ರಸ್ತರಾಗಿದ್ದಾರೆ. ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರದ ವರದಿ ಪ್ರಕಾರ ಅಸ್ಸಾಂನ ತಿನ್ಸುಕಿಯಾ ಮತ್ತು ಧೆಮಾಜಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ನೀರಿನಲ್ಲಿ ಮಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ಇದುವರೆಗೂ 42,476.18 ಹೆಕ್ಟೇರ್ ಕೃಷಿ ಭೂಮಿ ಮುಳುಗಿದ್ದು ಬರೋಬ್ಬರಿ 2,208 ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಬ್ರಹ್ಮಪುತ್ರಾ ನದಿ ನೀಮಾಟಿಘಾಟ್, ತೇಜ್ಪುರ್, ಗುವಾಹಟಿ ಮತ್ತು ದುಬ್ರಿ ಎಂಬಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅದೇ ರೀತಿ ಸುಬಾನ್ಸಿರಿ ನದಿ ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನರ ಆತಂಕ ಹೆಚ್ಚಿಸುತ್ತಿದೆ.
ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಸರ್ಕಾರ 489 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2.87 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಭೀಕರ ನೆರೆಯಿಂದಾಗಿ ಇದುವರೆಗೂ 74 ರಸ್ತೆಗಳು, 6 ಸೇತುವೆಗಳು ಕೊಚ್ಚಿಹೋಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.