ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮಲ್ಲಿ ಯಾರಾದರೂ ಸ್ಟಾರ್ಟ್ ಅಪ್ ಶುರು ಮಾಡುವುದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೀರಿ ಅಂತಾದಲ್ಲಿ ಅದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಅಥವಾ ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಸಣ್ಣ- ಪುಟ್ಟ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಂಡು, ಮುಂದಕ್ಕೆ ಸಾಗಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಅವುಗಳ ವಿಸ್ತರಣೆಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಇನ್ನು ಸರಿಯಾದ ಸಂಪನ್ಮೂಲ ವ್ಯಕ್ತಿಗಳು, ಕೆಲಸಗಾರರನ್ನು ಹುಡುಕಾಡುತ್ತಿದ್ದೀರಿ ಅಂತಾದಲ್ಲಿ ಅಂಥವರು ಸಹ ದೊರೆಯಲಿದ್ದಾರೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ಬಳಸುವ ಭಾಷೆ, ಅದನ್ನು ಆಡಿದ ರೀತಿ ಹಾಗೂ ಇತರ ವಿಚಾರಗಳನ್ನು ಮುಂದು ಮಾಡಿಕೊಂಡು, ಹೀಯಾಳಿಸಬಹುದು. ಆದ್ದರಿಂದ ಗುಂಪು ಗುಂಪಾಗಿ ಜನರು ಇರುವ ಕಡೆಗೆ, ಅದರಲ್ಲೂ ಸಣ್ಣ ತಪ್ಪು ಮಾತು ಕೂಡ ದೊಡ್ಡ ಅವಮಾನಕ್ಕೆ ಕಾರಣ ಆಗುವಂಥ ಕಡೆಗೆ ಸುಮ್ಮನೆ ಇದ್ದರೆ ಒಳಿತು. ಪ್ರೀತಿ- ಪ್ರೇಮ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಲಿವೆ. ನೀವಾಗಿಯೇ ಕರೆ ಮಾಡುವುದರ ಮೂಲಕ ಸಮಸ್ಯೆಯೊಂದನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೀವು ಇತರರನ್ನು ನಂಬಿಕೊಂಡು ವಹಿಸಿದ್ದ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದ ಕಾರಣಕ್ಕೆ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವಂಥವರು, ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲಿಕೆ ವೃತ್ತಿಯನ್ನು ಮಾಡುತ್ತಿರುವವರಿಗೆ ವರ್ಚಸ್ಸಿಗೆ ಪೆಟ್ಟು ಬೀಳುವಂಥ ಕೆಲವು ಘಟನೆಗಳು ನಡೆಯಲಿವೆ. ನೀವು ಈ ಹಿಂದೆ ಯಾವಾಗಲೋ ಹೇಳಿದ್ದ ಸುಳ್ಳು, ಆಡಿದ್ದ ಮಾತು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಮುಂದೆ ಮಾಡಿಕೊಂಡು ಈಗ ನಿಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡಲಿದ್ದಾರೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇನ್ನೇನು ಪ್ರಮುಖ ಹುದ್ದೆಯೊಂದು ನಿಮಗೆ ದೊರೆಯಲಿದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು ಕೊನೆ ಕ್ಷಣದಲ್ಲಿ ಕೈ ತಪ್ಪಿದೆ ಎಂಬ ಮಾಹಿತಿ ನಿಮಗೆ ಬರಬಹುದು. ನಿಮಗೆ ಇಷ್ಟು ಸಮಯ ಬಹಳ ಹತ್ತಿರವಾಗಿದ್ದ ಮೇಲಧಿಕಾರಿ ಒಬ್ಬರು ನಿಮ್ಮ ಸಾಮರ್ಥ್ಯದ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸುವಂತಹ ಸನ್ನಿವೇಶಕ್ಕೆ ಎದುರಾಗಲಿದ್ದೀರಿ. ಹಳೇ ದ್ವೇಷ ಸಾಧನೆಗೆ ಕೆಲವರು ಗಟ್ಟಿಯಾಗಿ ಪ್ರಯತ್ನಿಸುತ್ತಿರುವುದು ನಿಮ್ಮ ಗಮನಕ್ಕೆ ಬರಲಿದ್ದು, ಇದಕ್ಕೆ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿ ನೀವಿರುತ್ತೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಈಗಾಗಲೇ ವಧು ಅಥವಾ ವರನನ್ನು ನೋಡಿಕೊಂಡು ಬಂದಿದ್ದೇವೆ, ಒಪ್ಪುತ್ತಾರಾ ಇಲ್ಲವೋ ಎಂದು ಉತ್ತರದ ನಿರೀಕ್ಷೆಯಲ್ಲಿ ಇದ್ದೇವೆ ಎಂಬುವವರಿಗೆ ಮನಸ್ಸು ಬಯಸುವಂಥ ಉತ್ತರ ದೊರೆಯಲಿದೆ. ಮಧುಮೇಹ ಅಥವಾ ರಕ್ತದೊತ್ತಡದ ಸಮಸ್ಯೆ ಇರುವಂಥವರು ಔಷಧೋಪಚಾರದ ವಿಷಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಾಧ್ಯವಾದಷ್ಟೂ ತಾಳ್ಮೆ, ಸಂಯಮ ಹಾಗೂ ಸಮಾಧಾನದಿಂದ ಇರುವುದಕ್ಕೆ ಪ್ರಯತ್ನಿಸಿ. ಇತರರಿಂದ ಪಡೆದುಕೊಂಡಂಥ ಸಾಲದ ಮೊತ್ತವನ್ನು ಹೇಳಿದ ಸಮಯಕ್ಕೆ ಹಿಂತಿರುಗಿಸುವುದಕ್ಕೆ ಪ್ರಯತ್ನಿಸಿ. ಇನ್ನು ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಕಂತುಗಳನ್ನು ನಿಗದಿತ ದಿನಾಂಕಕ್ಕೆ ಪಾವತಿಸುವ ಕಡೆಗೆ ಲಕ್ಷ್ಯ ನೀಡಿ. ನೀವು ಅದನ್ನು ಮರೆತು, ಆ ನಂತರ ಪರಿತಪಿಸುವಂತಾಗುತ್ತದೆ, ಎಚ್ಚರ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ವಿದೇಶಗಳಿಗೆ ಉದ್ಯೋಗ ನಿಮಿತ್ತವಾಗಿ ತೆರಳಬೇಕು ಎಂದಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಹೆಚ್ಚಿವೆ. ತರಕಾರಿ, ಹೂವು- ಹಣ್ಣಿನ ವ್ಯವಹಾರ, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರಬಹುದು. ಇನ್ನು ದೀರ್ಘಾವಧಿಯ ಆರ್ಡರ್ ಗಳು ಸಹ ದೊರೆಯುವ ಅವಕಾಶಗಳು ಹೆಚ್ಚಿವೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮಗೆ ಯಾರ ಜತೆಗೆ ಈಗಾಗಲೇ ವೈಮನಸ್ಯ ಇರುತ್ತದೋ ಅಂಥ ವ್ಯಕ್ತಿಗಳ ಕೈಕೆಳಗೆ ಅಥವಾ ಜತೆಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಡ ಮಾಡಿದ್ದರಿಂದಾಗಿ ಕೆಲವು ಉದ್ಯೋಗಾವಕಾಶಗಳು ಕೈ ತಪ್ಪಿ ಹೋಗುವಂಥ ಸಾಧ್ಯತೆಗಳಿದ್ದು, ಅತಿ ಮುಖ್ಯವಾದ ವಿಚಾರಗಳು ಇದ್ದಲ್ಲಿ ತಡ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಿ. ಇನ್ನು ಮದುವೆ ನಿಶ್ಚಯ ಆಗಿರುವಂಥವರು ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡುವುದು, ಮಾತು ಬಿಡುವುದು ಇಂಥದ್ದನ್ನು ಮಾಡಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಒಂದು ವೇಳೆ ನೀವೇನಾದರೂ ಈಗ ಇರುವಂಥ ಮನೆಯನ್ನು ಖಾಲಿ ಮಾಡಿ, ಹೊಸ ಮನೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದಲ್ಲಿ ಅಂದುಕೊಂಡಂಥ ಮನೆ ದೊರೆಯುವ ಅವಕಾಶ ಹೆಚ್ಚಿಗೆ ಇದೆ. ಸಾಲ ಹಾಗೂ ಮನೆಯ ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಗಂಭೀರವಾದ ಚರ್ಚೆಗಳು ಆಗಲಿವೆ. ಈ ಹಿಂದೆ ನೀವಾಡಿದ್ದ ಮಾತುಗಳು ಹಾಗೂ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುವ ಸಾಧ್ಯತೆಗಳು ಹೆಚ್ಚಿವೆ. ಇಂಥ ಯಾವುದೇ ಬೆಳವಣಿಗೆಯಾದರೂ ಧೈರ್ಯಗುಂದಬೇಡಿ.