ಬಹುನಿರೀಕ್ಷಿತ ಹಾಗೂ ಯುವಕರ ಹಾಟ್ ಫೆವರಿಟ್ 2024 ಜಾವಾ 42 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು 250 ಸಿಸಿ ಎಂಜಿನ್ನೊಂದಿಗೆ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ. ಈ ಬೈಕ್ ಯಾವ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ? ಬೈಕ್ ಎಷ್ಟು ಶಕ್ತಿಶಾಲಿ ಎಂಜಿನ್ ಹೊಂದಿದೆ? ಹಳೆಯ ಆವೃತ್ತಿಗೆ ಹೋಲಿಸಿದರೆ 2024 ಜಾವಾ 42 ಬೈಕ್ನಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಇದರಲ್ಲಿ ಕಾಣಬಹುದು, ಬೆಲೆ ಎಷ್ಟು? ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಕಾರ್ಯಕ್ಷಮತೆ ಮತ್ತು ನಿಯೋ-ಕ್ಲಾಸಿಕ್ ವಿನ್ಯಾಸದ ಬೈಕ್ಗಳನ್ನು ಇಷ್ಟಪಡುವವರಿಗೆ, 2024 ಜಾವಾ 42 ಉತ್ತಮ ಆಯ್ಕೆ ಆಗಿರಲಿದೆ. ಕಂಪನಿಯು ಈ ಬೈಕ್ ಅನ್ನು ವಿಶೇಷ ಶೈಲಿ ಹಾಗೂ ಫೀಚರ್ಸ್ನೊಂದಿಗೆ ಲಾಂಚ್ ಮಾಡಿದೆ. ಆರು ಹೊಸ ಬಣ್ಣಗಳೊಂದಿಗೆ ಒಟ್ಟು 14 ಬಣ್ಣದ ಆಯ್ಕೆಗಳಲ್ಲಿ ಈ ಬೈಕ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ವೆಗಾ ವೈಟ್, ವಾಯೇಜರ್ ರೆಡ್, ಅಸ್ಟೆರೊಯ್ಡ್ ಗ್ರೇ, ಒಡಿಸ್ಸಿ ಬ್ಲ್ಯಾಕ್, ನೆಬ್ಯುಲಾ ಬ್ಲೂ ಮತ್ತು ಸೆಲೆಸ್ಟಿಯಲ್ ಕಾಪರ್ ಮ್ಯಾಟ್ ಸೇರಿವೆ.
2024 ರ ಜಾವಾ 42 ನಲ್ಲಿ, ಕಂಪನಿಯು 17 ಮತ್ತು 18 ಇಂಚಿನ ಮಿಶ್ರಲೋಹ ಮತ್ತು ಸ್ಪೋಕ್ ಚಕ್ರಗಳ ಆಯ್ಕೆಯನ್ನು ನೀಡಿದೆ. ಇದರೊಂದಿಗೆ, ರೌಂಡೆಡ್ ಹೆಡ್ಲೈಟ್ಗಳು, ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳು, ಮೊದಲಿಗಿಂತ ಉತ್ತಮ ಗ್ರೌಂಡ್ ಕ್ಲಿಯರೆನ್ಸ್, ಡ್ಯುಯಲ್ ಚಾನೆಲ್ ಎಬಿಎಸ್, ಅಸಿಸ್ಟ್ ಮತ್ತು ಸ್ಲಿಪ್ ಕ್ಲಚ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಜೊತೆಗೆ ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಪಡೆದಿದೆ.
ಕಂಪನಿಯು ಹೊಸ ಬೈಕ್ನಲ್ಲಿ 250 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ನೀಡಿದೆ. ಇದರೊಂದಿಗೆ ಆರು ಸ್ಪೀಡ್ ಗೇರ್ ಬಾಕ್ಸ್ ಲಭ್ಯವಿದೆ. ಈ ಎಂಜಿನ್ನಿಂದ ಬೈಕ್ 27.32 ಪಿಎಸ್ ಪವರ್ ಮತ್ತು 26.84 ನ್ಯೂಟನ್ ಮೀಟರ್ ಟಾರ್ಕ್ ಪಡೆಯುತ್ತದೆ. ಬೈಕ್ ನಲ್ಲಿ ಟ್ವಿನ್ ಎಕ್ಸಾಸ್ಟ್ ಸಿಸ್ಟಂ ಕೂಡ ನೀಡಲಾಗಿದೆ. ಕಂಪನಿಯ ಪ್ರಕಾರ, ಇದನ್ನು ಮೊದಲಿಗಿಂತ ಉತ್ತಮವಾಗಿ ಟ್ಯೂನ್ ಮಾಡಲಾಗಿದೆಯಂತೆ.
ಜಾವಾ ತನ್ನ ಬೈಕ್ ಅನ್ನು 1.73 ಲಕ್ಷ ರುಪಾಯಿಗಳು ಎಕ್ಸ್ ಶೋ ರೂಂ ಬೆಲೆಗೆ ಪರಿಚಯಿಸಿದೆ. ಇದರಲ್ಲಿ ಸ್ಪೋಕ್ ವೀಲ್ ಆಯ್ಕೆಯನ್ನು ನೀಡಲಾಗಿದೆ. ಆದರೆ ಗ್ರಾಹಕರು ಅಲಾಯ್ ಚಕ್ರಗಳಿರುವ ಬೈಕ್ ಖರೀದಿಸಲು ಬಯಸಿದರೆ, ಅವರು ಎಕ್ಸ್ ಶೋ ರೂಂ ಬೆಲೆ 1.89 ಲಕ್ಷ ರುಪಾಯಿಗಳನ್ನು ಪಾವತಿ ಮಾಡಬೇಕಿದೆ. ಇದರ ಟಾಪ್ ವೆರಿಯಂಟ್ ನ ಎಕ್ಸ್ ಶೋ ರೂಂ ಬೆಲೆ 1.98 ಲಕ್ಷ ರುಪಾಯಿಗಳಾಗಿದೆ.