2024 ಜನವರಿ 22, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿಯ ಶುಭ ಸೋಮವಾರ, ಭಾರತದ ಹೆಮ್ಮೆಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನವಾಗಿ ತಲೆ ಎತ್ತಿ ನಿಂದಿದ್ದ ಪ್ರಭು ಶ್ರೀರಾಮ ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠೆಯಾದ ದಿನ. ಈ ಶುಭ ದಿನ ವನ್ನ ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಲು ರಾಮ ಜನ್ಮ ಭೂಮಿ ಟ್ರಸ್ಟ್ ಕರೆ ನೀಡಿದೆ. ಈ ಶುಭ 3 ದಿನಗಳು ಶ್ರೀ ರಾಮನ ಉತ್ಸವ ನಡೆಸಲು ರಾಮ ಜನ್ಮ ಭೂಮಿ ಟ್ರಸ್ಟ್ ತೀರ್ಮಾನಿಸಿದೆ. ಅಲ್ಲದೆ, ಅಯೋಧ್ಯೆಯಲ್ಲಿ ಮೂರು ದಿನಗಳ ಕಾಲ ಉತ್ಸವ ಹಮ್ಮಿಕೊಂಡಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರವು ಪ್ರತಿ ವರ್ಷ ಈ ದಿನವನ್ನು ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಲು ನಿರ್ಧರಿಸಿದೆ.
ರಾಮಲಾಲ್ಲಾ ವಿಗ್ರಹ ಪ್ರತಿಷ್ಠಾಪನೆಯ ವಾರ್ಷಿಕೋತ್ಸವಕ್ಕೆ ಶ್ರೀ ರಾಮನ ಜನ್ಮ ಭೂಮಿ ಜಗಮಗ ಎನ್ನುವಂತೆ ಸಿದ್ದವಾಗಿದೆ. ಮೂರು ದಿನಗಳ ಪ್ರತಿಷ್ಠಾ ದ್ವಾದಶಿ ಆಚರಣೆಯ ಸಂಭ್ರಮ ಪ್ರತಿಷ್ಠಾಪನೆಯಾದ ಇಂದಿನಿಂದ ಆರಂಭವಾಗುತ್ತಿದೆ.
ಯೋಗಿಯಿಂದ ರಾಮಲಲ್ಲಾಗೆ ಅಭಿಷೇಕ
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ಅಯೋಧ್ಯೆಯ ರಾಮ ಮಂದಿರದಲ್ಲಿ ಇರಲಿದ್ದಾರೆ. ಹಾಗೆಯೇ ಯೋಗಿ ಅವರು ರಾಮಲಾಲ್ಲಾ ಮೂರ್ತಿಗೆ ಅಭಿಷೇಕ ಮಾಡಲಿದ್ದಾರೆ. ಅಭಿಷೇಕದ ನಂತರ ರಾಮನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ನಂತರ ಯೋಗಿ ಆದಿತ್ಯನಾಥ್ ಅವರಿಂದ ಮಹಾ ಮಂಗಳಾರತಿ ನಡೆಯಲಿದೆ. ಇದಾದ ನಂತರ ಮಧ್ಯಾಹ್ನ 2 ಗಂಟೆಗೆ ತಿಲದಲ್ಲಿ ಮೊದಲ ಬಾರಿಗೆ ಭಕ್ತರು ಮತ್ತು ಅತಿಥಿಗಳನ್ನು ಉದ್ದೇಶಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಲಿದ್ದಾರೆ.
ಪ್ರತಿಷ್ಠಾ ದ್ವಾದಶಿ ಉತ್ಸವ; ಏನಿರಲಿದೆ?
ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ನಡೆಯುವ ರಾಮಲಲ್ಲಾ ಸನ್ನಿಧಿಯ ಪ್ರಥಮ ವಾರ್ಷಿಕ ಉತ್ಸವವಾದ ‘ಪ್ರತಿಷ್ಠಾ ದ್ವಾದಶಿ’ಯ ಸಲುವಾಗಿ ಇಂದಿನಿಂದ 3 ದಿನಗಳ ಕಾಲ ಅಂದರೆ ಜನವರಿ 13 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿದೆ. ಮೊದಲ ದಿನವಾದ ಜನವರಿ 11 ರಂದು ರಾಮಲಲ್ಲಾ ಮಹಾಭಿಷೇಕ, ಅಲಂಕಾರ, ಅರ್ಪಣೆ ಹಾಗೂ ಆರತಿ ನಡೆಯಲಿದೆ. ಇದಾದ ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಇದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ.
ಪ್ರತಿಷ್ಠ ದ್ವಾದಶಿಯ ಸಲುವಾಗಿ ಅಂಗದ ತಿಲದಲ್ಲಿ ಮೂರು ದಿನವೂ ರಾಮಚರಿತಮಾನಸ ಪಾರಾಯಣ, ರಾಮಾಯಣ ಪ್ರವಚನ, ಶ್ರೀರಾಮನ ಜನ್ಮ ಕಥಾ ಮತ್ತು ಸಾಂಸ್ಕೃತಿಕ ಸಂಜೆಯಂತಹ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ರಾಮಲಲ್ಲಾ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಮಹಾ ಪ್ರಸಾದವನ್ನು ವಿತರಿಸಲು ನಿರ್ಧಾರ ಮಾಡಲಾಗಿದೆ.
ಪ್ರಾಣ ಪ್ರತಿಷ್ಠೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿನ, ಎಲ್ಲಾ ಮೂರು ದಿನಗಳ ಕಾಲ ರಾಮಲಲ್ಲಾ ಆರತಿ ಪಾಸ್ಗಳು ಮತ್ತು ವಿಶೇಷ ದರ್ಶನ ಪಾಸ್ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಶ್ರೀರಾಮನಿಗೆ ಆರತಿ ಸಮಯದಲ್ಲಿಯೂ ಭಕ್ತರಿಗೆ ದರ್ಶನ ವ್ಯವಸ್ತೆ ಮಾಡಲಾಗಿದೆ. ಜನ ಹೆಚ್ಚಾಗುವ ಇಂತಹ ಸಂದರ್ಭದಲ್ಲಿ ದರ್ಶನದ ಅವಧಿಯನ್ನ ಸುಮಾರು ಒಂದೂವರೆ ಗಂಟೆ ಹೆಚ್ಚಳ ಮಾಡಲಾಗುತ್ತದೆ.