ಘಟಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ನದಿಯ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರವಾಹದ ಬಿಸಿ ತಟ್ಟಿದೆ. ಸಚಿವ ಆರ್.ಬಿ. ತಿಮ್ಮಾಪುರ ಅವರ ಸ್ವಗ್ರಾಮ, ಮುಧೋಳ ತಾಲೂಕಿನ ಉತ್ತೂರಿನಲ್ಲಿ ಮನೆ, ತೋಟ ಹೊಂದಿದ್ದು, ಅವರ ತೋಟಕ್ಕೂ ಘಟಪ್ರಭಾ ನದಿ ನೀರು ಆವರಿಸಿದೆ. ತೋಟದಲ್ಲಿ ಬೆಳೆದ ಕಬ್ಬು ಸಹಿತ ವಿವಿಧ ಬೆಳೆಗಳು ನೀರಿನಲ್ಲಿ ನಿಂತಿದ್ದು, ಸಚಿವ ತಿಮ್ಮಾಪುರ ಅವರು ಸಹೋದರನ ಜತೆಗೆ ತೋಟಕ್ಕೆ ತೆರಳಿ ವೀಕ್ಷಿಸಿಸಿದರು. ಸಚಿವರ ತೋಟದ ಸುತ್ತಮುತ್ತಲಿನ ತೋಟಗಳಿಗೂ ನೀರು ನುಗ್ಗಿದ್ದು, ರೈತರ ಹೊಲಗಳನ್ನೂ ಪರಿಶೀಲಿಸಿದರು. ಪ್ರವಾಹದಿಂದ ಆದ ಬೆಳೆ ಹಾನಿಯ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.