ಬೆಂಗಳೂರು: ಗುಜರಾತ್ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಘಟನೆ ನಡೆದಿದೆ.
ಅಹಮದಾಬಾದ್ನ ಮಾಣಿಕ್ ಚೌಕ್ನ ಮೆಹುಲ್ ಠಕ್ಕರ್ ಅವರೇ ವಂಚನೆಗೊಳಗಾದ ವ್ಯಕ್ತಿ. ಈ ಕುರಿತು ನವರಂಗಪುರ್ ಪೊಲೀಸ್ ಠಾಣೆಯಲ್ಲಿ ಠಕ್ಕರ್ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ವಿಶೇಷವೆಂದರೆ ಠಕ್ಕರ್ ಅವರಿಗೆ ವಂಚಕರು ನೀಡಿದ್ದ ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರವಿರುವಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರವಿತ್ತು!
ಸದ್ಯ ಅನುಪಮ್ ಖೇರ್ ಅವರ ಚಿತ್ರವಿರುವ ₹500 ಮುಖಬೆಲೆಯ ನೋಟುಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ. ಅಲ್ಲದೇ ವ್ಯಾಪಕ ಟ್ರೋಲ್ ಕೂಡ ಆಗುತ್ತಿವೆ.
ಠಕ್ಕರ್ ಅವರ ಬಳಿ 2 ಕೆ.ಜಿ ಚಿನ್ನ ಖರೀದಿ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್ ಅನ್ನು ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲ ಅಸಲಿ ನೋಟುಗಳನ್ನು ಇಟ್ಟಿದ್ದರು. ಠಕ್ಕರ್ ಅವರ ಆರಂಭಿಕ ನಂಬಿಕೆ ಗಳಿಸಿದ ವಂಚಕರು ಇನ್ನೊಂದು ಅಂಗಡಿ ಬಳಿ ಚಿನ್ನ ಖರೀದಿಸಬೇಕಿದೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ತಕ್ಷಣವೇ ನೋಟುಗಳನ್ನು ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ಠಕ್ಕರ್ ಅವರಿಗೆ ಅಸಲಿ ವಿಚಾರ ಗೊತ್ತಾಗಿದೆ. ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಮುಖ ನೋಡಿ ಠಕ್ಕರ್ ಅವರು ಟುಸ್ಸ್ ಆಗಿ ಹೋಗಿದ್ದಾರೆ!
ಈ ಕುರಿತು ಮಾತನಾಡಿರುವ ನವರಂಗಪುರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ.ಎ. ದೇಸಾಯಿ ಅವರು ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವೆಬ್ಸೈಟ್ ವರದಿ ಮಾಡಿದೆ.