ಕಳೆದ ಎರಡು ವಾರಗಳ ಕಾಲ ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳಿಗೆ ಉನ್ನತ ಮಟ್ಟದ ನಿಯೋಗದ ಭೇಟಿಯು ಸಫಲವಾಗಿದ್ದು, ಅಲ್ಲಿನ ಉದ್ಯಮಿಗಳು ರಾಜ್ಯದಲ್ಲಿ 6,450 ಕೋಟಿ ರುಪಾಯಿ ಮೊತ್ತದ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಉಭಯ ದೇಶಗಳ ಭೇಟಿಯ ಫಲಶ್ರುತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಇದರ ಫಲವಾಗಿ ರಾಜ್ಯದಲ್ಲಿ 1 ಸಾವಿರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.
ಹೂಡಿಕೆಗೆ ಆಸಕ್ತಿ ಮತ್ತು ಒಪ್ಪಂದ ಮಾಡಿಕೊಂಡ ಕಂಪನಿಗಳು:
- ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ಐದು ಸಾವಿರ ಕೋಟಿ ರುಪಾಯಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದೆ.
- ಕೊರಿಯಾದ ಮಷಿನ್ ಟೂಲ್ಸ್ ಕಂಪನಿ ಡಿಎನ್ ಸಲ್ಯೂಷನ್ಸ್ ಸಂಸ್ಥೆಯು ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು ಒಂದು ಸಾವಿರ ಕೋಟಿ ರುಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
- ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೋ ಸಂಸ್ಥೆಯು ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್ಶಿಪ್ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು 210 ಕೋಟಿ ರುಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
- ಬ್ಯಾಟರಿ ಸೆಲ್ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಡೈಕಿ ಆ್ಯಕ್ಸಿಸ್, ಹೈವಿಷನ್ ಮತ್ತು ಇಎಂಎನ್ಐ ಕಂಪನಿ ಜಂಟಿಯಾಗಿ 210 ಕೋಟಿ ರುಪಾಯಿ ಹೂಡಿಕೆಗೆ ಒಪ್ಪಂದಕ್ಕೆ ಸಹಿ ಹಾಕಿವೆ.
- ಸುಮಿಟೊಮೊ ಹೆವಿ ಇಂಡಸ್ಟ್ರೀಸ್ ಬೆಂಗಳೂರಿನಲ್ಲಿ ತನ್ನ ಪ್ರಮುಖ ಕಚೇರಿ ಆರಂಭಿಸಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ.