ಗ್ಯಾರಂಟಿಗಳನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆ ಆಗುತ್ತಿವೆ ಎಂಬ ಸಚಿವರುಗಳ ಹೇಳಿಕೆಗಳ ಬಗ್ಗೆಯೂ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಅದಲ್ಲಿಯೂ ಸಿಎಂ ಹಾಗೂ ಡಿಸಿಎಂ ಅವರುಗಳು ರಾಜ್ಯದ ಜನತೆಗೆ ಒಂದು ಮಾತು ಕೊಟ್ಟಿದ್ದರು. ‘ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ’ ಅಂದಿದ್ದರು. ಐದು ಗ್ಯಾರಂಟಿಗಳನ್ನು ಕೊಡಿ ಎಂದು ಕಾಕಾ ಪಾಟೀಲ್ ಕೇಳಿಲ್ಲ, ಮಹದೇವಪ್ಪ ಅವರೂ ಕೇಳಿರಲಿಲ್ಲ, ರಾಜ್ಯದ ಜನರೂ ಕೇಳಿರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಐದು ಗ್ಯಾರಂಟಿಗಳ ಭರವಸೆ ಕೊಟ್ಟಿದ್ದು ಸಿಎಂ ಸಿದ್ದರಾಮಯ್ಯ ಅವರು. ಈಗಾಗಲೇ 15 ಬಜೆಟ್ ಮಂಡನೆ ಮಾಡಿದ್ದಾರೆ, ಅವರು ಅತ್ಯಂತ ಅನುಭವಿಗಳು. ನಾವು ಪ್ರತಿನಿತ್ಯ ನೋಡುತಿದ್ದೇವೆ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಪೆಟ್ರೋಲ್, ಡಿಸೇಲ್, ನೋಂದಣಿ, ಮುದ್ರಾಂಕ ಶುಲ್ಕ, ಅಬಕಾರಿ ಸುಂಕ ಸೇರಿ ಅನೇಕ ಕಡೆ ದರ ಹೆಚ್ಚಳ ಮಾಡುತ್ತಾ ಬಂದಿದೆ. ಮತ್ತೊಂದು ಕಡೆ ಭೂಮಿಗಳ ಮಾರ್ಗದರ್ಶಿ ಮೌಲ್ಯವನ್ನು (ಗೈಡೆನ್ಸ್ ವ್ಯಾಲೂ) 30% ಏರಿಕೆ ಮಾಡಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ಉದ್ದೇಶದಿಂದಲೇ ಸರ್ಕಾರ ಜನರನ್ನು ಸುಳಿಗೆ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಟೀಕಿಸಿದರು.