ರಾಜಧಾನಿ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಘಟನೆ ಮಾಸುವ ಮುನ್ನವೇ ನಗರದ ಜೆಪಿ ನಗರದ ಉಡುಪಿ ಉಪಹಾರ ಬಳಿ ಅನುಮಾನಾಸ್ಪದ ವಸ್ತು ಸ್ಪೋಟಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗಳು ಆಗಿವೆ.
ರಾಮೇಶ್ವರಂ ಕೆಫೆಯಲ್ಲಿ ಕೂಡ ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎನ್ನಲಾಗಿತ್ತು ಆದರೆ ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನಾಸ್ಪದವಾಗಿದೆ.
ಜೆಪಿ ನಗರದ ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸಮೀರ್ ಹಾಗೂ ಮೋಸಿನ್ ಎಂಬುವವರಿಗೆ ತೀವ್ರವಾಗಿ ಗಾಯಗೊಂಡಿದೆ. ಇನ್ನೂ ಈ ಘಟನೆಯು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಂಭವಿಸಿದೆ. ಇಬ್ಬರೂ ಯುವಕರು ಕೂಡ ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕುಕ್ಕರ್ ನಿಂದ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಸುಟ್ಟ ವಯರ್ಗಳು ಕೂಡ ಪತ್ತೆಯಾಗಿದೆ.
ಘಟನೆ ಸಂಬಂಧ ಸ್ಥಳಕ್ಕೆ ಎನ್ಐಎ ತಂಡ ಭೇಟಿ ನೀಡಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮನೆಯಲ್ಲಿ ಸುಟ್ಟ ವಸ್ತುಗಳು ಪತ್ತೆಯಾಗಿರುವುದರಿಂದ ಸ್ಫೋಟದ ಬಗ್ಗೆ ತನಿಖಾ ತಂಡಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.