ಕಳೆದೊಂದು ವಾರದಿಂದ ಸದನದಲ್ಲಿ ಸದ್ದು ಮಾಡುತ್ತಿರುವ ವಾಲ್ಮೀಕಿ ನಿಗಮ ಹಗರಣ ಈಗ ಮತ್ತೊಂದು ಸ್ವರೂಪ ಪಡೆಯುತ್ತಿದೆ. ಇಂದು ಕಲಾಪದ ವೇಳೆ ಬಿಜೆಪಿ ಶಾಸಕರು ಮತ್ತೆ ಮುಡಾ ಹಗರಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ಕೊಡಿ ಎಂದು ಕೆಳಮನೆ ಮತ್ತು ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.
ಆದ್ರೆ, ಬಿಜೆಪಿ ಆಗ್ರಹಕ್ಕೆ ಒಪ್ಪದ ಸ್ಪೀಕರ್ ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ತೆಗೆದುಕೊಳ್ಳುವಂಥದ್ದು ಏನಿದೆ ಎಂದು ಪ್ರಶ್ನಿಸಿದ್ದು, ರಿಜೆಕ್ಟ್ ಮಾಡಿದನ್ನು ಮತ್ತೆ ಅವಕಾಶ ನೀಡಲ್ಲ ಎಂದಿದ್ದಾರೆ. ಚರ್ಚೆಗೆ ಸ್ಪೀಕರ್ ಅವಕಾಶ ನೀಡದಿದ್ದರಿಂದ ರೊಚ್ಚಿಗೆದ್ದಿರುವ ಬಿಜೆಪಿ, ಜೆಡಿಎಸ್ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇಂತಹ ಹಗರಣ ಬಗ್ಗೆ ಧ್ವನಿ ಎತ್ತಲು ಅವಕಾಶ ಕೊಡುತ್ತಿಲ್ಲ. ಸ್ಪೀಕರ್ ಪೀಠಕ್ಕೆ ಅಗೌರವ ತೋರುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಸ್ಪೀಕರ್ ಮಾಡುತ್ತಿದ್ದಾರೆ. ಮೂಡ ಹಗರಣದ ಬಗ್ಗೆ ಮತನಾಡಿದ್ರೆ ಸಿಎಂ ಮಾನ ಮರ್ಯಾದೆ ಹೋಗುತ್ತೆ ಎಂದು ಸ್ಪೀಕರ್ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಜಂಟಿ ಅಹೋರಾತ್ರಿ ಹೋರಾಟ ನಡೆಸಲಿದ್ದಾರೆ.