ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್ ರದ್ದತಿಗೆ ಆದೇಶ ಹೊರಡಿಸಿದೆ. ಆದರೆ ಅದರ ನಿರ್ವಹಣೆ ಮಾಡುವ ವಿಷಯದಲ್ಲಿ ಆಗಿರುವ ಲೋಪದಿಂದಾಗಿ ಲಕ್ಷಾಂತರ ಬಿಪಿಎಲ್ ಕಾರ್ಡುದಾರರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್ ರದ್ದತಿಗೆ ಆದೇಶ ಹೊರಡಿಸಿದ ಬಳಿಕ ‘ತಿದ್ದುಪಡಿ ಅವಕಾಶವನ್ನು ನೀಡಿರುವುದರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ.
ಡಿಸೆಂಬರ್ 31 ರವರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಸಾರ್ವಜನಿಕರಿಗೆ ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. ಸಾರ್ವಜನಿಕರು ಬೆಳಗಿನಿಂದಲೇ ಒಂದು ಕೇಂದ್ರದಿಂದ ಇನ್ನೊಂದೆಡೆ ಅಲೆಯುತ್ತಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನದಂದು ತಿದ್ದುಪಡಿಗಾಗಿ ಸರದಿಯಲ್ಲಿ ಸಾಲಿನಲ್ಲಿ ನಿಂತು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜ್ಯ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಹಲವು ಗೊಂದಲ ಸೃಷ್ಟಿಸುತ್ತಿದೆ. ಹೀಗಾಗಿ ದಿನನಿತ್ಯ ಸಾರ್ವಜನಿಕರು ಪಡಿತರ ಚೀಟಿ ವಿಚಾರಕ್ಕೆ ರೋಸಿಹೋಗಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಹೆಸರು ತೆಗೆಯುವುದು, ಫೋಟೊ ಬದಲಾವಣೆ, ಮನೆ ಯಜಮಾನನ ಹೆಸರು ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ಎಲ್ಲ ತಿದ್ದುಪಡಿ ಮಾಡಿಕೊಳ್ಳಲು ಸೂಕ್ತ ದಾಖಲೆಯಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣ ಪತ್ರ, ಆರು ವರ್ಷದ ಒಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ದಾಖಲೆ ನೀಡಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ತಿದ್ದುಪಡಿ ಕೇಂದ್ರಗಳು ಇಲ್ಲದಿರುವುದರಿಂದ ಸಾರ್ವಜನಿಕರು ದಿನಗಟ್ಟಲೇ ಸರದಿಸಾಲಿನಲ್ಲಿ ನಿಂತರೂ ತಮ್ಮ ಕೆಲಸ ಆಗದೇ ನಿರಾಸೆಯಿಂದ ತೆರಳುವಂತಾಗಿದೆ. ಇಂದು ತಿದ್ದುಪಡಿಗೆ ಕೊನೆಯ ದಿನವಾಗಿದ್ದರಿಂದ ತಿದ್ದುಪಡಿಗೆ ಬಯೋಮೆಟ್ರಿಕ್ ಅನುಮತಿ ಪಡೆದಿರುವ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದ್ದು, ಹಲವು ಜನರು ತಿದ್ದುಪಡಿ ಆಗದೇ ಮನೆಗೆ ಮರಳಿದ್ದಾರೆ.
ಬೆಂಗಳೂರು ಒನ್ ಎಲ್ಲ ಕೇಂದ್ರಗಳಿಗೂ ಅಧಿಕಾರ ಇಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಬೆಂಗಳೂರಿನಲ್ಲಿ ಬೆಂಗಳೂರು ಒನ್ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಾಸ್ತವವಾಗಿ ಬೆಂಗಳೂರಿನಲ್ಲಿರುವ ಎಲ್ಲ ಬೆಂಗಳೂರು ಒನ್ ಕೇಂದ್ರಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿಲ್ಲ. ಕೆಲವೇ ಕೆಲವು ಬೆಂಗಳೂರು ಒನ್ ಕೇಂದ್ರಗಳಿಗೆ ಬಯೋಮೆಟ್ರಿಕ್ ಅನುಮತಿ ನೀಡಿದ್ದು, ಆ ಕೇಂದ್ರಗಳಲ್ಲಿ ಜನ ಸಂದಣಿ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.