- ಸಕಲೇಶಪುರ ಬಳ್ಳೆಯಲ್ಲಿ ಅರ್ಜುನ ಆನೆ ಸ್ಮಾರಕಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ
ದಸರಾ ಉತ್ಸವ ಅಂದರೆ ಕಣ್ಣ ಮುಂದೆ ತುಂಬಿಕೊಳ್ಳುವುದು ಅರ್ಜುನನ ಪಾತ್ರ. ಅರ್ಜುನ ಅಂಬಾರಿ ಹೊತ್ತು ನಡೆದರೆ ಇಡೀ ದಸರಾ ಉತ್ಸವಕ್ಕೆ ಕಳೆ ತುಂಬಿರುತ್ತಿತ್ತು. ಆದರೆ ಆ ಅರ್ಜುನ ಇಂದಿಲ್ಲವಾದರೂ ಅವನನ್ನ ಯಾರೂ ಮರೆಯುವಂತಿಲ್ಲ. ಆದರಲ್ಲೂ ವನ್ಯ ಜೀವಿಗಳನ್ನ ಪ್ರೀತಿಸುವವರ ಮನಸ್ಸಿನಿಂದ ಅವನು ದೂರವಾಗಲೂ ಸಾಧ್ಯವೇ ಇಲ್ಲ.
ಆ ದಿನ ಕಾಡಾನೆಗಳ ಜೊತೆ ಹೋರಾಡಿದ ಅರ್ಜುನ ತನಗೆ ಅಂದೇ ಸಾವು ಎಂದು ತಿಳಿದಿರಲಿಲ್ಲ. ಅರ್ಜುನ ಸತ್ತು ತಿಂಗಳುಗಳೆ ಉರುಳಿಹೋಗಿದೆ. ಆದರೆ ಅವನ ನೆನಪು ಶಾಶ್ವತವಾಗಿರುವಂತೆ ಅರಣ್ಯ ಇಲಾಖೆ ಮತ್ತೆ ಅರ್ಜುನನ ನೆನಪು ಮಾಡುತ್ತಿದೆ.
ಅಂದಾ ಹಾಗೇ ಜುಲೈನಲ್ಲಿ ಸಕಲೇಶಪುರ ಬಳ್ಳೆಯಲ್ಲಿ ಅರ್ಜುನ ಆನೆ ಸ್ಮಾರಕಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿರುವುದಿಷ್ಟು.
ಹಾಸನ ಜಿಲ್ಲೆ ಯಸಳೂರು ಬಳಿ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಮತ್ತು ಅರ್ಜುನನ ಆವಾಸಸ್ಥಾನವಾಗಿದ್ದ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಈ ಎರಡೂ ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು. ಜೊತೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವುದು. ಈ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು. ಸಚಿವರು 6 ತಿಂಗಳುಗಳ ಒಳಗಾಗಿ ಅಂದರೆ ಬರುವ ಡಿಸೆಂಬರ್ 4ರೊಳಗೆ ಅಂದರೆ ಅರ್ಜುನನ ಪ್ರಥಮ ಪುಣ್ಯತಿಥಿಯ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.