ಬೆಂಗಳೂರಿನ ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್ ಭಾರಿ ಚರ್ಚೆಯಲ್ಲಿದೆ. ಈ ಬಗ್ಗೆ ಪೊಲೀಸ್ ಡಿಪಾರ್ಟ್ಮೆಂಟ್ ಗಮನ ಹರಿಸಿ ಮಾರತಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮಾಡಲು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ. ಇದು ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿದೆ.
ಟೆಕ್ಕಿ ಅತುಲ್ ಸುಭಾಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಬರೋಬ್ಬರಿ 24 ಪುಟಗಳಿವೆ. ಅತುಲ್ ವಿರುದ್ಧ ಪತ್ನಿ ನಿಕಿತಾ ಸಿಂಘಾನಿಯಾ ಎಂಬಾಕೆ ವರದಕ್ಷಿಣೆ ಸೇರಿ 9 ಪ್ರಕರಣಗಳನ್ನು ದಾಖಲಿಸಿದ್ದಳು. ತನ್ನ ಗಂಡನ ಕಡೆಯವರು ತನಗೆ 10 ಲಕ್ಷ ರೂ. ವರದಕ್ಷಿಣೆ ಕೇಳಿದ್ದರಿಂದಲೇ ತನ್ನ ತಂದೆ ಆಘಾತದಿಂದ ಸಾವನ್ನಪ್ಪಿದ್ದರು ಎಂದು ಆಕೆ ಆರೋಪನ್ನು ಮಾಡಿದ್ದಳು.
ಹಾಗಾಗಿ ಈ ವರದಕ್ಷಿಣೆ ಪ್ರಕರಣ ಮತ್ತಷ್ಟು ಚರ್ಚೆಯಲ್ಲಿತ್ತು. ಒಟ್ಟು 9 ಪ್ರಕರಣಗಳಲ್ಲಿ 6 ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದು ಉಳಿದ 3 ಹೈಕೋರ್ಟ್ ನಲ್ಲಿದ್ದವು. ಅತುಲ್ 40 ಬಾರಿ ಬೆಂಗಳೂರಿನಿಂದ ಟೌನ್ ಪುರಕ್ಕೆ ಹೋಗಿ ಬಂದಿದ್ದರು ಎಂದು ಅವರ ಸಹೋದರ ತಿಳಿಸಿದ್ದಾರೆ. 2019 ರಲ್ಲಿ ಮೃತ ಅತುಲ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರು ತನ್ನ ತಂದೆಯ ಸಾವಿನ ಬಗ್ಗೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು. 2022 ರಲ್ಲಿ ವರದಕ್ಷಿಣೆಗಾಗಿ ಕಿರುಕುಳ ಮತ್ತು ಹಲ್ಲೆಯನ್ನು ಆರೋಪಿಸಿ ಪೊಲೀಸ್ ದೂರನ್ನೂ ದಾಖಲಿಸಿದ್ದರು.
ಅತುಲ್ ಡೆತ್ನೋಟ್ನಲ್ಲಿ ಈ ವಿಚಾರದ ಕುರಿತು ಬರೆದಿದ್ದು, ಆಕೆಯ ತಂದೆ ಸುಮಾರು 10 ವರ್ಷಗಳಿಂದ ಮಧುಮೇಹ ಮತ್ತು ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರು ಹೇಳಿದರು. ನಿಕಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಹೊರಿಸಲಾಗಿದೆ. ಆದರೆ ಸೋಮವಾರ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಅತುಲ್ ಸುಭಾಷ್ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮಗನ ಅಂತಿಮ ವಿಧಿಗಳನ್ನು ಮಾಡಿದ ಬಳಿಕ ಕುಟುಂಬವು ಬಿಹಾರದಲ್ಲಿರುವ ಸಮಷ್ಟಿಪುರಕ್ಕೆ ಮರಳಿದೆ. ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರ ಆರೋಪಗಳಿಗೆ ಅವರ ತಂದೆ ಪವನ್ ಮೋದಿ ಸ್ಪಷ್ಟನೆ ನೀಡಿದರು.
ನನ್ನ ಮಗ ಎಂದೂ ಮದ್ಯ ಸೇವಿಸಿ ಹೊಡೆಯುವ ಕೃತ್ಯವನ್ನು ಮಾಡಿಲ್ಲ ,ಅದಲ್ಲದೆ ನಾವು ಅವರ ಬಳಿ ಯಾವ 10 ಲಕ್ಷ ರೂ. ವರದಕ್ಷಿಣೆಯನ್ನೂ ಕೇಳಿಲ್ಲ ಇವೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಒಂದರ ಹಿಂದೆ ಒಂದು ಸುಳ್ಳು ಕೇಸುಗಳನ್ನು ನಮ್ಮ ಮೇಲೆ ಹಾಕಿದ್ದರು. ಇಷ್ಟೇ ಅಲ್ಲದೇ ಪತಿ ತನಗೆ ಬೆದರಿಕೆ ಹಾಕಿ ತನ್ನ ಸಂಪೂರ್ಣ ಸಂಬಳವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ನಿಕಿತಾ ಹೇಳಿಕೊಂಡಿದ್ದರು.