ಕಾಂಗ್ರೆಸ್ ಪಕ್ಷ, ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸುವ ಮೈಸೂರು ಚಲೋ ಪಾದಯಾತ್ರೆಗೆ ನಾಳೆ ಬೆಳಗ್ಗೆ ಚಾಲನೆ ಸಿಗಲಿದೆ. ಭ್ರಷ್ಟ ಕಾಂಗ್ರೆಸ್ ಹಾಗೂ ಹಗರಣಗಳ ಸರ್ಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಶೂನ್ಯತೆಯ ಕೊಡುಗೆ ನೀಡಿದೆ. ಇದು ಅಸಮರ್ಥ ಸರ್ಕಾರ ಎಂದು ಟೀಕಿಸಿದರು.
ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡಿ, ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಹಗರಣ, ಭ್ರಷ್ಟಚಾರ ಸಂಬಂಧ ನಮ್ಮ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಮೊದಲು ಉತ್ತರಿಸಲಿ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ- ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಾಳೆ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ. ಶನಿವಾರ ಬೆಳಗ್ಗೆ 8 : 30 ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. 8 ದಿನಗಳ ಪಾದಯಾತ್ರೆ ಇದಾಗಿರುತ್ತದೆ ಎಂದು ವಿಜಯೇಂದ್ರ ವಿವರಿಸಿದರು.