ಇಂದು ದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಹೊಸದಾಗಿ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಇದರಲ್ಲಿ ಬೆಂಗಳೂರು-ತಮಿಳುನಾಡಿನ ಮಧುರೈ ನಡುವೆ ಸಂಚರಿಸುವ ಹೊಸ ವಂದೇ ಭಾರತ್ ರೈಲೂ ಸೇರಿದೆ. ಕೇಸರಿ ಬಣ್ಣದ ಈ ಹೊಸ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಮಧುರೈ- ಬೆಂಗಳೂರು, ಬೆಂಗಳೂರು-ಮಧುರೈ ನಡುವೆ ಸಂಚರಿಸಲಿದೆ.
ಬೆಳಿಗ್ಗೆ 5.15 ಕ್ಕೆ ಮಧುರೈ ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು (Train Number 20671) ದಿಂಡಿಗಲ್- ತಿರುಚ್ಚಿ-ಕರೂರು-ನಾಮಕ್ಕಲ್-ಸೇಲಂ-ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕಂಟೋನ್ಮಂಟ್ ರೈಲು ನಿಲ್ದಾಣವನ್ನು ಅದೇ ದಿನದ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಸರಿ ಸುಮಾರು 8 ಗಂಟೆ ಪ್ರಯಾಣದ ಅವಧಿಯಾಗಿರುತ್ತದೆ. ಮಧುರೈ- ಬೆಂಗಳೂರು ಟಿಕೆಟ್ ದರ ₹1,575
ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಮಧ್ಯಾಹ್ನ 1.30 ಕ್ಕೆ ಬೆಂಗಳೂರು ಕಂಟೋನ್ಮಂಟ್ ರೈಲು ನಿಲ್ದಾಣದಿಂದ ಹೊರಡುವ ರೈಲು (Train Number 20672) ಕೆ.ಆರ್.ಪುರಂ-ಸೇಲಂ-ನಾಮಕ್ಕಲ್-ಕರೂರು- ತಿರುಚ್ಚಿ-ದಿಂಡಿಗಲ್ ಮಾರ್ಗವಾಗಿ ಮಧುರೈ ಜಂಕ್ಷನ್ ಅನ್ನು ಅದೇ ದಿನ ರಾತ್ರಿ 9.45 ಕ್ಕೆ ತಲುಪಲಿದೆ. ಸರಿ ಸುಮಾರು 8 ಗಂಟೆ ಪ್ರಯಾಣದ ಅವಧಿಯಾಗಿರುತ್ತದೆ. ಬೆಂಗಳೂರು-ಮಧುರೈ ಟಿಕೆಟ್ ದರ ₹1,575
ಈ ವೇಳಾಪಟ್ಟಿಯನ್ನು ರೈಲ್ವೆ ಸಚಿವಾಲಯ ತನ್ನ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ. ಬೆಂಗಳೂರು-ಮಧುರೈ ನಡುವೆ 521 ಕಿ.ಮೀ ಅಂತರವಿದೆ. ಐತಿಹಾಸಿಕ ಹಾಗೂ ದೇವಾಲಯಗಳ ನಗರಿ ಎಂದು ಮಧುರೈ ಖ್ಯಾತಿಯಾಗಿದ್ದು ಕರ್ನಾಟಕದಿಂದ ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಪ್ರವಾಸಿಗರು, ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.