ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆಗಾಗಿ ಬೇಕಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ಇಂದು ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ. ಆ ಮೂಲಕ, ಅಧಿವೇಶನ ಮುಗಿಯುವ ಹತ್ತು ದಿನಗಳ ಕಾಲ ಅವರು ಇಡಿ ಬಂಧನದಿಂದ ಸೇಫ್ ಆಗಿದ್ದಾರೆ. ಕಳೆದ ಮೂರು ದಿನಗಳಿಂದ ಬಸವನಗೌಡ ದದ್ದಲ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದೆ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ನಿವಾಸ ಹಾಗೂ ಕಚೇರಿಗಳಿಗೆ ದಾಳಿ ಮಾಡಿದ್ದರು. ನಾಗೇಂದ್ರ ಅವರನ್ನು ಪ್ರಶ್ನಿಸಿ ಬಳಿಕ ವಶಕ್ಕೆ ಪಡೆದು ಕೊಂಡೊಯ್ದಿದ್ದರು. ಇದರೊಂದಿಗೆ ದದ್ದಲ್ ಅವರಿಗೂ ಬಂಧನ ಭೀತಿ ಶುರುವಾಗಿತ್ತು. ಇಡಿ ಅಧಿಕಾರಿಗಳು ಹುಡುಕಾಡುತ್ತಿದ್ದಂತೆ ದದ್ದಲ್ ನಾಪತ್ತೆಯಾಗಿದ್ದರು.
ದದ್ದಲ್ ಅವರು ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಅವರ ಹೆಸರೂ ಕೇಳಿಬಂದಿದೆ. ದದ್ದಲ್ ಅವರ ಪಿಎ ಸಾಕಷ್ಟು ಹಣದ ಡೀಲಿಂಗ್ ನಡೆಸಿರುವುದು ಪತ್ತೆಯಾಗಿದ್ದು, ಇದರಿಂದ ಆರೋಪದ ತೂಗುಗತ್ತಿ ದದ್ದಲ್ ಅವರ ಮೇಲೂ ತೂಗುತ್ತಿದೆ. ಮೊನ್ನೆ ಇಡಿ ಬಂಧನದಿಂದ ಪಾರಾಗಲು ದದ್ದಲ್ ಅವರು ಎಸ್ಐಟಿ ಮುಂದೆ ಹಾಜರಾಗಿ ಇಡೀ ದಿನ ಅಲ್ಲಿ ಕುಳಿತಿದ್ದರು. ಸಂಜೆ ಬಳಿಕ ಕಣ್ಮರೆಯಾಗಿದ್ದರು.
ಸದ್ಯ ವಿಧಾನಸಭೆ ಕಲಾಪಕ್ಕೆ ಆಗಮಿಸುವ ಮೂಲಕ ಅವರು ಬಂಧನದಿಂದ ಬಚಾವ್ ಆಗಿದ್ದಾರೆ. ಇನ್ನೂ ಹತ್ತು ದಿನ ಶಾಸಕ ದದ್ದಲ್ ಬಂಧನ ಸಾಧ್ಯತೆ ಕಡಿಮೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಒಂದು ವೇಳೆ ಅಧಿವೇಶನ ಸಂದರ್ಭದಲ್ಲೆ ಶಾಸಕರ ತನಿಖೆ ನಡೆಸಬೇಕು, ಬಂಧನ ಮಾಡಬೇಕು ಎಂದರೆ ಸ್ಪೀಕರ್ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅತ್ತ ಇಡಿ ಅಥವಾ ಎಸ್ಐಟಿ ನೊಟೀಸ್ ನೀಡಿದರೂ ಸದನಕ್ಕೆ ಹಾಜರಾಗಬೇಕು ಎಂದು ಸಬೂಬು ನೀಡಬಹುದು. ಹೀಗಾಗಿ ಅಧಿವೇಶನ ಮುಗಿಯುವವರೆಗೂ ದದ್ದಲ್ ಬಂಧನ ಸಾಧ್ಯತೆ ಇಲ್ಲದಾಗಿದೆ.