ರಾಜಧಾನಿ ಬೆಂಗಳೂರಿನಲ್ಲಿ ಸಿಗರೇಟ್, ಬೀಡಿ ಸೇದುವವರ ಸಂಖ್ಯೆ ಅಧಿಕವಾಗಿದೆ. ಈ ಧೂಮಪಾನ ಮಾಡುವುದರಿಂದ ಭಾರಿ ಪ್ರಮಾಣದ ಕಸ ಕೂಡ ಸಂಗ್ರಹವಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಳವಳ ವ್ಯಕ್ತಪಡಿಸಿತ್ತು. ಚಹಾ ಅಂಗಡಿ, ಮನೆಗಳು ಸೇರಿದಂತೆ ಬಹುತೇಕ ಎಲ್ಲೆಡೆಯೂ ಸಿಗರೇಟ್ ಸೇದಿ ಬಿಸಾಡಿದ ತುಂಡುಗಳು ಹೆಚ್ಚಾಗಿ ಸಂಗ್ರಹವಾಗುತ್ತಿದೆ.
ಈ ಸಿಗರೇಟ್ ತುಂಡುಗಳ ವೈಜ್ಞಾನಿಕ ವಿಲೇವಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವರ್ಷಗಳ ಹಿಂದೆಯೇ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ ಬೆಂಗಳೂರಿನಲ್ಲಿ ಇದು ಅನುಷ್ಠಾನಗೊಂಡಿರಲಿಲ್ಲ. ಈಗ ಇದರ ಬಗ್ಗೆ ಆಸಕ್ತಿ ತೋರಿರುವ ಬಿಬಿಎಂಪಿ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಬಿಸಾಡಲು ಪ್ರತ್ಯೇಕವಾದ ಕಸದ ಬುಟ್ಟಿಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಪ್ರತಿದಿನವೂ ಲಕ್ಷಾಂತರ ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಈ ತುಂಡುಗಳು ಹಾನಿಕಾರಕ ಅಂಶಗಳನ್ನು ಒಳಗೊಂಡಿರುವುದರಿಂದ ಚರಂಡಿ, ನೀರು, ಮಣ್ಣಿನಲ್ಲಿ ಸೇರಿಕೊಂಡು ಪರಿಸರವನ್ನು ಕಲುಷಿತಗೊಳಿಸುತ್ತಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಸಿಗರೇಟ್, ಬೀಡಿ ತುಂಡುಗಳ ಮುಕ್ತಿಗೆ ಬಿಬಿಎಂಪಿ ಈ ಪ್ಲ್ಯಾನ್ ಮಾಡಿಕೊಂಡಿದೆ.
ಈ ಯೋಜನೆಯಡಿ ಬಿಬಿಎಂಪಿಯು ಸಿಗರೇಟ್ ತಯಾರಿಸುವ ಮುಂಚೂಣಿ ಸಂಸ್ಥೆಯಾಗಿರುವ ಐಟಿಸಿ ಸಹಯೋಗದಲ್ಲೇ ಸಿಗರೇಟ್ ತುಂಡುಗಳನ್ನು ಕಲೆಕ್ಟ್ ಮಾಡಲು ಬೆಂಗಳೂರಿನ ಹಲವು ಕಡೆಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಡಸ್ಟ್ಬಿನ್ ಅಳವಡಿಕೆಗೆ ಈಗಾಗಲೇ ಕೆಲವು ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಶೀಘ್ರದಲ್ಲೇ ಇದು ರೂಲ್ಸ್ ಎಲ್ಲೆಡೆ ಜಾರಿಯಾಗಲಿದೆ.
ಈ ಕಸದ ಬುಟ್ಟಿಗಳಲ್ಲಿ ಸಂಗ್ರಹವಾಗುವ ಸಿಗರೇಟ್ ತುಂಡುಗಳ ಕಸದಿಂದ ಇಂಧನ ಉತ್ಪಾದಿಸುವುದು ಅಥವಾ ಮರುಬಳಕೆ ಮಾಡುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಹೇಳಲಾಗಿದೆ.
ಸಿಗರೇಟ್ ತಯಾರಿಸುವ ಕಂಪನಿಗಳ ಮೇಲೆಯೇ ಸಿಗರೇಟ್ ತುಂಡುಗಳ ಸಂಗ್ರಹ ಹಾಗೂ ಮರುಬಳಕೆ ಜವಾಬ್ದಾರಿ ನೀಡಲಾಗುವುದು. ಈ ಸಂಬಂಧ ಬಿಬಿಎಂಪಿ ಈಗಾಗಲೇ ಸಿಗರೇಟ್ ತಯಾರಕ ಕಂಪನಿಗಳೊಂದಿಗೆ ಚರ್ಚೆಯೂ ನಡೆಸಿದೆ. ಈ ನಿಯಮಕ್ಕೆ ಸಂಸ್ಥೆಗಳು ಕೂಡ ಒಪ್ಪಿಗೆ ನೀಡಿವೆ. ಜೊತೆಗೆ ಸಿಗರೇಟ್ ಪ್ಯಾಕೆಟ್ ಮೇಲೆಯೇ ವಿಲೇವಾರಿ ನಿಯಮಗಳನ್ನು ಮುದ್ರಿಸಲು ರಾಜ್ಯ ಸರ್ಕಾರದ ಅಧೀನ ಸಂಸ್ಥೆ ತಂಬಾಕು ನಿಯಂತ್ರಣ ಕೋಶ ಕೂಡ ಮುಂದಾಗಿದೆ.
ಒಂದು ವೇಳೆ ಈ ಸಿಗರೇಟ್ ತುಂಡುಗಳ ಸಂಗ್ರಹ ಹಾಗೂ ಮರುಬಳಕೆ ಪ್ರಕ್ರಿಯೆ ವಿಫಲವಾದರೆ, ಸಿಗರೇಟ್ ತಯಾರಕ ಸಂಸ್ಥೆಗಳ ಮೇಲೆಯೇ ಕ್ರಮ ಜರುಗಿಸಲು ಸಹ ಬಿಬಿಎಂಪಿ ನಿರ್ಧರಿಸಿದೆ ಎನ್ನಲಾಗಿದೆ. ಸಿಗರೇಟ್ ತುಂಡುಗಳ ವೈಜ್ಞಾನಿಕ ಸಂಗ್ರಹಣೆ ವಿಳಂಬವಾಗಿದೆ ಎಂದು ನಾಗರಿಕ ಸಂಸ್ಥೆ ಒಪ್ಪಿಕೊಂಡಿದೆ. ವಿಳಂಬಕ್ಕೆ ಸಿಗರೇಟ್ ತಯಾರಕರನ್ನು ದೂಷಿಸಿದೆ. ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಸಿಗರೇಟ್ ತುಂಡು ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಐಟಿಸಿಗೆ ಪತ್ರ ಕಳುಹಿಸಿದೆ.
ಸಿಗರೇಟ್ ಸೇದುವವರು ಕೂಡ ಈ ನಿಯಮಗಳನ್ನು ಪಾಲಿಸಬೇಕು. ಸ್ಟೈಲಾಗಿ ಸಿಗರೇಟ್ ಸೇದಿದ ನಂತರ ತುಂಡನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಪರಿಸರ ಮಾಲಿನ್ಯ ದೃಷ್ಟಿಯಿಂದ ಸೇದಿದ ನಂತರ ತುಂಡನ್ನು ನೇರವಾಗಿ ಡಸ್ಟ್ಬಿನ್ಗಳಲ್ಲಿ ವಿಲೇವಾರಿ ಮಾಡಿದರೆ, ಅರ್ಧ ಕೆಲಸ ಯಶಸ್ವಿಯಾಗಿ ಮುಗಿಯುತ್ತದೆ ಎಂದು ಹೇಳಲಾಗಿದೆ.