- 2024ರ ಲೋಕಸಭಾ ಚುನಾವಣೆ ಅಂತ್ಯ
- ಜೂನ್ 4ರಂದು ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಪ್ರಾರಂಭ
- ಮತ ಎಣಿಕೆ ವೇಳೆ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ
ಬೆಂಗಳೂರು: 2024 ಲೋಕಸಭಾ ಚುನಾವಣೆ ಶನಿವಾರ ಅಂತ್ಯವಾಗಿದ್ದು, ಎಕ್ಸಿಟ್ ಪೋಲ್ಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚಿಸುವುದು ಪಕ್ಕಾ ಎಂದು ಭವಿಷ್ಯ ನುಡಿದಿವೆ. ಕರ್ನಾಟಕದಲ್ಲೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಕಾಂಗ್ರೆಸ್ನಿಂದ, ಬಿಜೆಪಿಯಿಂದ ಡಾ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದಾರೆ. ಇಬ್ಬರು ಪ್ರಬಲ ನಾಯಕರು ಕಣದಲ್ಲಿರುವುದರಿಂದ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಜೂನ್ 4ರಂದು ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ಡಾ ಮಂಜುನಾಥ್ ಪತ್ರ ಬರೆದಿದ್ದಾರೆ.
ಎಣಿಕೆ ಕಾರ್ಯ ನಡೆಯುವಾಗ ಯಾವುದೇ ಗೊಂದಲ, ಗಲಾಟೆ ನಡೆಯುವುದನ್ನ ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ ಮಾಡಬೇಕು. ಎಣಿಕೆ ಕೇಂದ್ರದ ಸುತ್ತಲೂ ಹೆಚ್ಚುವರಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳ ನಿಯೋಜನೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಎಣಿಕೆ ವೇಳೆ ಯಾವುದೇ ಅನಧಿಕೃತ ಪ್ರವೇಶಗಳನ್ನ ತಡೆಗಟ್ಟಲು ಸಿಬ್ಬಂದಿಯನ್ನ ನಿಯೋಜಿಸಬೇಕು. ಪಕ್ಷದ ಏಜೆಂಟ್ಗಳು ಸೇರಿದಂತೆ ಮತ ಎಣಿಕೆ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಬೇಕು ಹಾಗೂ ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಅವಕಾಶ ಮಾಡಿಕೊಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.