ಬೆಂಗಳೂರು: ಇತ್ತೀಚೆಗಷ್ಟೇ ಬಸ್ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ನಮ್ಮ ಮೆಟ್ರೋ ಟಿಕೆಟ್ ದರದಲ್ಲೂ ಏರಿಕೆಯಾಗಲಿದ್ದು, ಇಂದು ಬಿಎಂಆರ್ಸಿಎಲ್ ದರ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದು, ಶುಕ್ರವಾರ ಬಿಎಂಆರ್ಸಿಎಲ್ ಮುಖ್ಯ ಕಚೇರಿಯಲ್ಲಿ ದರ ಏರಿಕೆ ಸಂಬಂಧ ಸಭೆ ನಡೆಸಲಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ಶೇಕಡಾ 40-50 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, 40 ರಿಂದ 45 ವರೆಗೆ ಏರಿಕೆ ಮಾಡಬಹುದು ಎಂದು ಬೋರ್ಡ್ ಟೀಂ ಸಲಹೆ ನೀಡಿದೆ.
ಇಂದು BMRCL ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ದರ ಏರಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. 2017 ರಲ್ಲಿ 10-15 ರಷ್ಟು ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್ಸಿಎಲ್ ಏರಿಕೆ ಮಾಡಿತ್ತು. ಸದ್ಯ ಕನಿಷ್ಠ ದರ 10 ರೂಪಾಯಿಯಿಂದ ಗರಿಷ್ಠ ದರ 60 ರೂಪಾಯಿ ವರೆಗೆ ಇದೆ. ಇನ್ನು ದರ ಏರಿಕೆ ಆದರೆ ಇನ್ನುಮುಂದೆ ಕನಿಷ್ಠ ದರ 15 ರೂಪಾಯಿಯಿಂದ ಗರಿಷ್ಠ ದರ 90 ರೂಪಾಯಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಮಿತಿ ನೀಡಿರುವ ವರದಿ
- ಮೆಟ್ರೋ ಟಿಕೆಟ್ ದರವನ್ನ 40 ರಿಂದ 45 ವರೆಗೆ ಏರಿಕೆ ಮಾಡಬಹುದು .
- ರಜೆ ದಿನ ಹಾಗೂ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣ ದರ ಇಳಿಕೆ ಮಾಡಿದರೆ ಉತ್ತಮ.
- ಸಾರ್ವಜನಿಕ ರಜಾ ದಿನಗಳಲ್ಲಿ ರಿಯಾಯಿತಿ ನೀಡಬೇಕು.
- ನಾನ್ ಪೀಕ್ ಅವರ್ಗಳಲ್ಲಿ ಡಿಸ್ಕೌಂಟ್ ನೀಡಬೇಕು.
- ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ನೀಡಲು ಸೂಚನೆ.
- ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಹಾಗೂ ಮಧ್ಯಾಹ್ನದಿಂದ ಸಂಜೆ 4 ಗಂಟೆಯವರೆಗೆ ಡಿಸ್ಕೌಂಟ್ಗೆ ಶಿಫಾರಸು.
- ಪ್ರಯಾಣಿಕರನ್ನು ಸೆಳೆಯಲು ರಿಯಾಯಿತಿ ಪ್ರಯಾಣಕ್ಕೆ ಪ್ಲಾನ್.
ವೆಚ್ಚದ ದೃಷ್ಟಿಯಿಂದ ಈ ನಿರ್ಧಾರ!
ಇತ್ತೀಚೆಗೆ ನಮ್ಮ ಮೆಟ್ರೋ ಬಹಳಷ್ಟು ಕಡೆ ವಿಸ್ತರಣೆಯಾಗಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಹಳದಿ ಮಾರ್ಗ ಚಾಲನೆ ಆಗಲಿದೆ. ಇದಕ್ಕಾಗಿ ಈಗಾಗಲೇ ಮಂಡಳಿ ಕಾರ್ಯಾರಂಭ ಶುರುಮಾಡಿದೆ. ದಿನದಿಂದ ದಿನಕ್ಕೆ ಮೆಟ್ರೋ ತನ್ನ ಮಾರ್ಗದಲ್ಲಿ ವಿಸ್ತರಣೆ ಮಾಡುತ್ತಿದ್ದು, ದಿನನಿತ್ಯ ಲಕ್ಷಗಟ್ಟಲೇ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮೆಟ್ರೋದಲ್ಲಾಗುವ ವೆಚ್ಚದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.