ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಮೃತಪಟ್ಟ 8 ಮಂದಿಯ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಎಂಟು ಮಂದಿ ಮೃತಪಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ ಘೋಷಣೆ ಮಾಡಿದ್ದಾರೆ. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ನಿನ್ನೆ ವೈಯಾನಡ್ಗೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಗಿದೆ. ಕಟ್ಟಡ ಕುಸಿತ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಳಾಗಿವೆ ಅವರ ಆಸ್ಪತ್ರೆ ಖರ್ಚು ಸರ್ಕಾರ ಭರಿಸುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ 5 ಲಕ್ಷ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಎರಡು ಲಕ್ಷ ನೀಡಲಾಗುತ್ತದೆ. ಬಿಬಿಎಂಪಿಯಿಂದ ಮೂರು ಲಕ್ಷ ಪರಿಹಾರ ಘೋಷಿಸಿದೆ ಎಂದು ತಿಳಿಸಿದರು.
ಮೃತದೇಹ ಕಳುಹಿಸುವ ಕೆಲಸ ಆಗುತ್ತದೆ. ಅನಧಿಕೃತವಾಗಿ ಕಟ್ಟಿದ ಕಟ್ಟಡಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆದರೂ ಕಟ್ಟಿದ್ದಾರೆ. ಜೋನ್ ನ ಐಎಎಸ್ ಅಫೀಸ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ನೋಟೀಸ್ ಕೊಡಲು ಹೇಳಲಾಗಿದೆ. ಕಾನೂನು ಪ್ರಕಾರ ಮನೆ ಕಟ್ಟಬೇಕು ಎಂದು ಜನರಿಗೆ ಮನವಿ ಮಾಡುತ್ತೇನೆ. ಕಳಪೆ ಕಾಮಗಾರಿಯಿಂದ ಈ ಕಟ್ಟಡ ಬಿದ್ದಿದೆ. ಅನಧಿಕೃತವಾಗಿ ಮನೆ ಕಟ್ಟಲು ಬಿಡಬಾರದು. ಇದಕ್ಕೆಲ್ಲಾ ಅಧಿಕಾರಿಗಳು ಹೊಣೆ ಹಾಗಾಗಿ ಕಮಿಷನರ್ಗೆ ಸೂಚನೆ ಕೊಟ್ಟಿದ್ದೇನೆ ಎಂದರು.