ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ 82ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಯಾಗಿದೆ. ಜೊತೆಗೆ ವಂಚನೆ ಕೇಸ್ನಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಆರೋಪಿ ಎಂದು 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷೆ ನೀಡುವ ಕುರಿತು ಇಂದಿಗೆ ಆದೇಶ ಕಾಯ್ದಿರಿಸಿತ್ತು. ಅದರಂತೆ ನ್ಯಾಯಾಲಯ ಆದೇಶ ಪ್ರಕಟ ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 6 ಕೇಸ್ಗಳಲ್ಲೂ ಶಾಸಕ ಸತೀಶ್ ಸೈಲ್ ದೋಷಿ ಎಂದು ಕೋರ್ಟ್ ಈಗಾಗಲೇ ಹೇಳಿದೆ.
ಕೇಸ್ನಲ್ಲಿ ದೋಷಿ ಆಗಿರುವ ಸತೀಶ್ ಸೈಲ್ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡನೆ ಮಾಡಿದರು. ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ಹೇಮಾ ಅವರು ವಾದ ಮಂಡನೆ ಮಾಡಿದರು. ಶಿಕ್ಷೆ ಪ್ರಕಟಣೆ ಮಾಡುವ ವೇಳೆ ಸತೀಶ್ ಸೈಲ್, ಮಹೇಶ್ ಬಿಳಿಯೆ ಅವರಿಗೆ ಜಡ್ಜ್ ಪ್ರಶ್ನೆ ಕೇಳಿದರು. ಎರಡು ಕಡೆಯ ವಾದ ಪತ್ರಿವಾದ ಆಲಿಸಿದ ಕೋರ್ಟ್ ಅಂತಿಮವಾಗಿ ಶಿಕ್ಷೆಯನ್ನು ಪ್ರಕಟಣೆ ಮಾಡಿದೆ.
ಏನಿದು ಪ್ರಕರಣ?
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಅತಿದೊಡ್ಡ ಅಕ್ರಮ. 2010ರಲ್ಲಿ ಬಳ್ಳಾರಿಯಿಂದ ಮ್ಯಾಂಗನೀಸ್ ಅದಿರನ್ನ ಕಾರವಾರ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಹಗರಣ ದೊಡ್ಡ ದೊಡ್ಡ ಘಟಾನುಘಟಿ ನಾಯಕರನ್ನೇ ಸುತ್ತಿಕೊಂಡಿತ್ತು. ಇದೇ ಕೇಸ್ ಹಾಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ನ ಸುಳಿಯೊಳಗೆ ಸಿಲುಕಿಸಿಕೊಂಡು ಇದೀಗ ಸಂಕಷ್ಟಕ್ಕೆ ತಳ್ಳಿದೆ.
ಸೀಜ್ ಆಗಿದ್ದ 11 ಸಾವಿರದ 312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸತೀಶ್ ಸೈಲ್ ಸಾಗಾಟ ಮಾಡಿದ್ದರು. ಈ ಅಕ್ರಮದಿಂದ ಸರ್ಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು. ಇದನ್ನು ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಬೆಳಕಿಗೆ ತಂದಿದ್ದರು. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇದೀಗ ಶಾಸಕನಿಗೆ ಸಂಕಷ್ಟ ಎದುರಾಗಿದೆ.