ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಂದ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಸಚಿವರು, ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು.
ಕಳೆದ ಎರಡು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ವಿಚಾರವನ್ನು ಸೂಕ್ಷ್ಮವಾಗಿ ಸರ್ಕಾರ ಗಮನಿಸುತ್ತಿದೆ. ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡ್ವೇಕು ಅಂತಾ ಬಂದಿರುವೆ. ಆಡಿಯೋ ಕೇಳಿಸಿಕೊಂಡಿಲ್ಲ, ಅಸಹ್ಯವಾಗಿ ಇದೆ ಅಂತ ಕೇಳಿದವರು ಹೇಳುತ್ತಾರೆ. ಗುತ್ತಿಗೆದಾರ ಚಲುವರಾಜು ಜೊತೆ ಸರ್ಕಾರ ಇರುತ್ತದೆ. ಅವರ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗುತ್ತಿಗೆದಾರನ ಮೇಳೆ ಮಾಜಿ ಮಂತ್ರಿಗಳು ಜಾತಿ ನಿಂದನೆ ಮಾಡುವುದು ಸರಿಯಲ್ಲ. ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮುನಿರತ್ನ ಅವರ ಮಾತುಗಳಿಂದ ಚಲುವರಾಜು ಕುಟುಂಬ ಖಿನ್ನತೆಗೆ ಒಳಪಟ್ಟಿದೆ. ಹೀಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕೆ ಧೈರ್ಯ ಹೇಳುವುದಕ್ಕೆ ಅವರ ಮನೆಗೆ ಭೇಟಿ ನೀಡಿರುವೆ ಎಂದು ಸಚಿವರು ಹೇಳಿದರು.