ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿರುವ ಹೊತ್ತಿನಲ್ಲೇ ಮತ್ತೆ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಸಂಡೂರು ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರ ಪ್ರಚಾರ ಮಾಡುತ್ತಿದ್ದ ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ಸಿಎಂ ಆಗಿ ಮುಂದುವರಿಯಲಿದ್ದೇನೆ ಎಂಬರ್ಥದ ಹೇಳಿಕೆ ನೀಡಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಸಮಾವೇಶದ ವೇದಿಕೆಯಲ್ಲಿ ಜನರನ್ನು ಮುಂದಿನ ಮೂರುವರೆ ವರ್ಷ ಯಾರು ಅಧಿಕಾರದಲ್ಲಿರುವವರು ಎಂದು ಪ್ರಶ್ನಿಸಿದ್ದರು. ಆಗ ಸಮಾವೇಶದಲ್ಲಿ ನೆರೆದಿದ್ದ ಜನ ಕಾಂಗ್ರೆಸ್ ಎಂದು ಉತ್ತರ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ , ‘ಸಿದ್ದರಾಮಯ್ಯ, ಕಾಂಗ್ರೆಸ್’ ಎಂದು ಒತ್ತುಕೊಟ್ಟು ಹೇಳಿದ್ದರು. ಇದೀಗ ಸಿದ್ದರಾಮಯ್ಯನವರ ಈ ಮಾತಿಗೆ ಪ್ರತಿಯಾಗಿ ಡಿಕೆ ಶಿವಕುಮಾರ್ ಬೆಂಬಲಿಗರು ಉತ್ತರ ಕೊಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಪಿ ಯೋಗೇಶ್ವರ ಪರ ಪ್ರಚಾರ ಮಾಡುತ್ತಿದ್ದ ವೇಳೆ ಅವರ ಬೆಂಬಲಿಗರು “ಮುಂದಿನ ಸಿಎಂ ಡಿಕೆ ಶಿವಕುಮಾರ್” ಅಂತ ಘೋಷಣೆ ಕೂಗಿದ್ದಾರೆ. ಇದರಿಂದ ಡಿಕೆಶಿ ಸ್ವಲ್ಪ ದೂರ ನಡೆದರಾದರೂ ಕಾರ್ಯಕರ್ತರ ಘೋಷಣೆ ನಿಂತಿಲ್ಲ. ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜೈ ಅಂತ ಘೋಷಣೆ ಕೂಗಿದ್ದಾರೆ. ಇನ್ನು, ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭಾಷಣಕ್ಕೆ ಆಹ್ವಿಸುವ ವೇಳೆ ಕೂಡ ಮುಖ್ಯಮಂತ್ರಿ ಕೂಗು ಕೇಳಿಬಂದಿದೆ.
ಕಾಂಗ್ರೆಸ್ ಮುಖಂಡ ಪ್ರಮೋದ್ “ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಲು ಆಗಮಿಸುತ್ತಿದ್ದಾರೆ” ಎಂದು ಹೇಳಿ ಡಿಕೆ ಶಿವಕುಮಾರ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಒಕ್ಕಲಿಗ ಕಾಂಗ್ರೆಸ್ ನಾಯಕರು ಚನ್ನಪಟ್ಟಣ ಗೆದ್ದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಚನ್ನಪಟ್ಟಣ ಅಖಾಡದಲ್ಲಿ ಪ್ರಚಾರ ನಡೆಸುತ್ತಿರುವ ಬಹುತೇಕ ಒಕ್ಕಲಿಗ ನಾಯಕರು ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಇದಕ್ಕೆ ಈ ಉಪಚುನಾವಣೆಯೇ ಭೂಮಿಕೆ ಎನ್ನುತ್ತಿದ್ದಾರೆ.
ಸಾಮಾನ್ಯವಾಗಿ ಈ ರೀತಿಯ ಘೋಷಣೆಗಳನ್ನು ತಮ್ಮ ಎದುರೇ ಕೂಗಿದಾಗ ಅದಕ್ಕೆ ಶಾಂತವಾಗಿರಿ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಈ ಬಾರಿ ಹಾಗಾಗಿಲ್ಲ. ಒಂದೆಡೆ ಸಿದ್ದರಾಮಯ್ಯ ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಂದೇಶ ನೀಡುತ್ತಿದ್ದಾರೆ. ಅದರ ಅರ್ಥ ಅವಧಿ ಮುಗಿಯುವವರೆಗೂ ಸಿಎಂ ಬದಲಾವಣೆ ಸಾಧ್ಯ ಇಲ್ಲ ಎಂದೇ. ಈಗ ಮೂರು ಉಪಚುನಾವಣೆಗಳ ಪ್ರಚಾರದಲ್ಲಿ ಸಿಎಂ ವಾರ್ ಜೋರಾಗಿಯೇ ನಡೆಯುತ್ತಿದೆ. ಉಪಚುನಾವಣೆ ಘೋಷಣೆಯಾಗುವವರೆಗೂ ಸಿಎಂ ಬದಲಾವಣೆ, ದಲಿತ ಸಿಎಂ.. ಚರ್ಚೆಗಳು ಚಾಲ್ತಿಯಲ್ಲಿದ್ದವು. ಆದರೆ ಉಪಚುನಾವಣೆ ಘೋಷಣೆಯಾದ ಮೇಲೆ ಎಲ್ಲ ರಾಜಕೀಯಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಸಿದ್ದರಾಮಯ್ಯ ಹೇಳಿಕೆಯಿಂದಾಗಿ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.