ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವರಾದ ಸಚಿವ ಜಮೀರ್ ಅಹಮ್ಮದ್, ಡಾ.ಜಿ ಪರಮೇಶ್ವರ್, ಹೆಚ್.ಸಿ ಮಹಾದೇವಪ್ಪ ಸೇರಿದಂತೆ ಹಲವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ರಾಜ್ಯಪಾಲರ ವಿರುದ್ಧ ಸಮರ ಸಾರಿರೋ ಸಿದ್ದರಾಮಯ್ಯಗೆ ತಮ್ಮ ಪಕ್ಷದ ಎಲ್ಲಾ ಶಾಸಕರ ಸಾಥ್ ಸಿಕ್ಕಿದೆ. ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಗ್ಗಟ್ಟಿನ ಹೋರಾಟದ ತೀರ್ಮಾನವಾಗಿದೆ. ಈ ಸಭೆಯಲ್ಲಿ ಇಡೀ ಪ್ರಕರಣದ ಬೆಳವಣಿಗೆ ವಿವರಿಸಿದ ಸಿಎಂ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನ ಪ್ರತಿಪಕ್ಷಗಳು ಟಾರ್ಗೆಟ್ ಮಾಡ್ತೀವೆ ಅಂತ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಲ್ಲದೇ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲೋದಾಗಿ ಶಪಥ ಮಾಡಿದ್ದಾರೆ. ಇದೇ ನಿಟ್ಟಿನಲ್ಲಿ ಸಿಎಂ, ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಾತ್ರೆ ಮಾಡಿದ್ದಾರೆ. ದೆಹಲಿ ಮಟ್ಟದಲ್ಲಿ ರಾಜ್ಯಪಾಲರ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲು ಹೈ ನಾಯಕರ ಭೇಟಿ ಮಾಡಲಿದ್ದಾರೆ.
ದೆಹಲಿ ಪ್ರಯಾಣಕ್ಕೂ ಮೊದಲು ಮಾತನಾಡಿರುವ ಡಿ.ಕೆ.ಶಿವಕುಮಾರ್.. ಯಾರು ಬೇಕಾದರೂ ದೆಹಲಿಗೆ ಬರಬಹುದು. ಬರೋರರನ್ನು ನಾವು ಬೇಡ ಅನ್ನೋಕೆ ಆಗಲ್ಲ. ಇಲಾಖೆ, ಪಾರ್ಟಿಯ ಕೆಲಸ ಇರುತ್ತದೆ. ನಮಗೆ ಪಾರ್ಟಿ, ಇಲಾಖೆ ಸೇರಿ ಎಲ್ಲಾ ಕೆಲಸವೂ ಇದೆ. ಅದಕ್ಕಾಗಿ ನಾನು ಸಿಎಂ ದೆಹಲಿಗೆ ಹೋಗುತ್ತಿದ್ದೇವೆ ಎಂದರು.
ಪ್ರಾಸಿಕ್ಯೂಷನ್ ಆದ ಮೇಲೆ ಎಲ್ಲವನ್ನೂ ಹೈಕಮಾಂಡ್ಗೆ ತಿಳಿಸಬೇಕು. ಯಾವ ರೀತಿ ನಮ್ಮ ಗವರ್ನರ್ ಕಚೇರಿ ದುರುಪಯೋಗ ಆಗಿದೆ ಎಂದು ಹೇಳಬೇಕಿದೆ. ಹದಿನೈದು ಬಿಲ್ಗಳನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ. ಸ್ಪಷ್ಟನೆ ಕೇಳಲಿ, ನಾನು ತಪ್ಪು ಎಂದು ಹೇಳೋದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾಕೆ ಇರಬೇಕು? ಬಿಜೆಪಿ ನಾಯಕರು ಹೇಳಿದ ಕೂಡಲೇ ವಾಪಸ್ ಕಳುಹಿಸಿಬಿಟ್ಟರೆ ಸರೀನಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ಸರ್ಕಾರ ಬೀಳಿಸೋಕೆ ಯಾರು ಯಾವ ಪ್ರಯತ್ನ ಮಾಡಿದರೂ ಆಗೋದಿಲ್ಲ. ನಾವು ಸುಮ್ಮನೆ ಕೂರೋದಿಲ್ಲ, ನಾವು ನಮ್ಮ ಕೆಲಸವನ್ನು ಮಾಡ್ತೀವಿ ಎಂದಿದ್ದಾರೆ.