ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್ಟಿಐ ಅರ್ಜಿ ಹಾಕಿಲ್ಲ, ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ. ಮ್ಯೂಸಿಕಲ್ ಚೇರ್ ಮಾಡುತ್ತಿರುವವರು ಪಟಾಕಿ ಇಡುತ್ತಿದ್ದಾರೆ. ಅವರು ಪಟಾಕಿ ಒಡೆದಾಗ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ 60 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ. ಈಗಾಗಲೇ ಬಿಪಿಎಲ್ ಕಾರ್ಡುದಾರರಿಗೆ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ. ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಿ, ಆ ಮೂಲಕ ಕಾರ್ಡ್ ರದ್ದುಪಡಿಸಿ ಗ್ಯಾರಂಟಿಗೆ ಹಣ ಉಳಿಸಲಾಗುತ್ತಿದೆ. ಜನರಿಗೆ ಗೊತ್ತಾಗದಂತೆ ತೆರಿಗೆ ವಿಧಿಸುವುದು ಹೇಗೆಂದು ತಂತ್ರ ಮಾಡಲು ಸಮಿತಿ ನೇಮಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದರು.
ಈಗಾಗಲೇ ಹಿಮಾಚಲ ಪ್ರದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ. ಕರ್ನಾಟಕ ಪಾಪರ್ ಆದರೂ ಪರವಾಗಿಲ್ಲ, ನಮ್ಮ ಬೇಳೆ ಬೇಯಬೇಕು ಎಂದು ಕಾಂಗ್ರೆಸ್ ಯೋಚಿಸಿದೆ. ಅಧಿಕಾರಿಗಳು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ವಯಂ ನಿವೃತ್ತಿ ಪಡೆಯಬೇಕು ಎಂಬಂತಹ ಸ್ಥಿತಿ ಇದೆ. ಇಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬದುಕುವ ಗ್ಯಾರಂಟಿ ಇಲ್ಲ ಎಂದು ದೂರಿದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ರವಿಚಂದ್ರ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕಕ್ಕೆ ಸಂಬಂಧಿಸಿದಂತೆ ತಮ್ಮ ಸಮಿತಿ ನೀಡಿದ್ದ ವರದಿಗೂ ರಾಜ್ಯ ಸರ್ಕಾರ ಮಂಡಿಸಿರುವ ವಿಧೇಯಕಕ್ಕೂ ಸಾಕಷ್ಟು ವೆತ್ಯಾಸವಿದೆ. ಶೇ.20 ರಷ್ಟು ಶಿಫಾರಸು ಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದರು. ಇದಕ್ಕೆ ಸಂಬಂಧ ಪಟ್ಟ ವಿವರಣೆ ನೀಡಿದರು.