ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ 2015 ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯವಿದೆ. ಪ್ರವಾಸೋದ್ಯಮ ತಾಣಗಳ ಸಮೀಕ್ಷೆ, ಸಂರಕ್ಷಣೆ ಇತ್ಯಾದಿಗಳ ಮಾಸ್ಟರ್ ಪ್ಲಾನ್ ಜಿಲ್ಲಾವಾರು ಸಿದ್ಧಪಡಿಸಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇರುವ ರಾಜ್ಯ 320 ಕಿಮಿ ಕರಾವಳಿ ಪ್ರದೇಶವಿದೆ. ಇದುವರೆಗೆ ನಮಗೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಪಡಿಸುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಎರಡನೇ ದಿನದ ಡಿಸಿ-ಸಿಇಒಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಹೊಸ ಪ್ರವಾಸೋದ್ಯಮ ನೀತಿ ರಚಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಿಸ್ತೃತವಾದ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
ಅನೇಕ ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲಿನಕಾಶೆ ಸಿದ್ಧಪಡಿಸಬೇಕು. ಪ್ರವಾಸೋದ್ಯಮ ಮೂಲಸೌಲಭ್ಯಗಳು ಅತ್ಯಂತ ಕಡಿಮೆಯಿದೆ. ಮಧುಗಿರಿಯಲ್ಲಿರುವ ಏಕಶಿಲಾ ಬೆಟ್ಟ ಹಿಂದಿನ ಬಾರಿ ಸರ್ಕಾರ ಇದ್ದಾಗ ಅಭಿವೃದ್ಧಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದರೂ, ಇದುವರೆಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ ಎಂದರು.