ಪಾನಮತ್ತ ವಿದ್ಯಾರ್ಥಿಯೋರ್ವ ತನ್ನನ್ನು ಕಾಲೇಜಿನ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೇ ಸೆಕ್ಯುರಿಟಿ ಗಾರ್ಡ್ ನನ್ನು ಇರಿದು ಕೊಂದು ಹಾಕಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಜೈಕಿಶೋರ್ ರಾಯ್ ಎಂಬಾತನನ್ನು ಭಾರ್ಗವ್ ಎಂಬ ವಿದ್ಯಾರ್ಥಿ ಇರಿದು ಕೊಂದಿದ್ದಾನೆ.
ಕಂಠಪೂರ್ತಿ ಕುಡಿದು ಬಂದಿದ್ದಿ ವಿದ್ಯಾರ್ಥಿ ಭಾರ್ಗವ್ ಸೆಕ್ಯುರಿಟಿ ಗಾರ್ಡ್ ಜೈಕಿಶೋರ್ ರಾಯ್ನ ಎದೆ ಮತ್ತು ಹೊಟ್ಟೆಗೆ 5 ರಿಂದ 6 ಬಾರಿ ಇರಿದಿದ್ದಾನೆ. ಜೈ ಕಿಶೋರ್ ರಾಯ್ ರಕ್ಷಣೆಗೆ ಧಾವಿಸಿದ ಸಹ ಸಿಬ್ಬಂದಿ ಬಲವಾಗಿ ಹಿಡಿದುಕೊಂಡಿದ್ರು ಪಟ್ಟು ಬಿಡದೇ ಚೂರಿಯಿಂದ ಎದೆಗೆ ಇರಿದಿದ್ದಾನೆ. ಕೇವಲ ಹದಿನೈದು ಸೆಕೆಂಡ್ ದಾಳಿಯ ಪರಿಣಾಮ ತೀವ್ರ ರಕ್ತಸ್ರಾವದಿಂದ ಸಹೋದ್ಯೋಗಿಗಳ ಕಣ್ಣಮುಂದೆಯೇ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಭಾರ್ಗವ್ ಇದೇ ಸಿಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದು ಪಿಜಿಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಂ ಎನ್ನುವಂತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭಾರ್ಗವ್ ನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.