ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿನ ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬಾರದೆಂದು ಪ್ರವಾಸೋದ್ಯಮ ಇಲಾಖೆಗೆ ಆದೇಶ ಮಾಡಿದೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ. ಇದೀಗ ಹಿಂದೂಗಳಿಗೆ ಘಾಸಿಯಾಗುವಂಥ ನಿರ್ಧಾರ ತೆಗೆದುಕೊಂಡಿದೆ ಎಂದು ಧಾರವಾಡದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ದೇಶದಲ್ಲಿ ಯಾತ್ರೆಗೆ ವಿಶೇಷ ಮಹತ್ವ ಇದೆ. ಧಾರ್ಮಿಕ ಸ್ಥಳಗಳಿಗೆ ಯಾತ್ರೆಗೆ ಅನ್ಯೋನ್ಯ ಸಂಬಂಧವಿದೆ. ನಮ್ಮಲ್ಲಿ ಪ್ರವಾಸವೆಂದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗೋದು. ಶೇ.95ರಷ್ಟು ಜನರು ಧಾರ್ಮಿಕ ಪ್ರವಾಸಕ್ಕೆ ಹೋಗುತ್ತಾರೆ. ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇದು ಬ್ರಿಟಿಷರ ಕಾಲದಿಂದಲೂ ಇದೆ. ಆದರೆ ಇದೀಗ ಸರಕಾರ ಹೊಸ ಆದೇಶ ಮಾಡಿದೆ. ಪ್ರವಾಸಿ ತಾಣಗಳಾಗಿರೋ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಆದೇಶ ನೀಡಿದೆ. ಸುತ್ತೋಲೆ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಆದೇಶಿಸಿದೆ. ಆ ಮೂಲಕ ಹಿಂದೂಗಳಿಗೆ ಮರ್ಮಾಘಾತ ಎಸಗಿದೆ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಸೇರಿ ಈ ಕೆಲಸ ಮಾಡಿದ್ದಾರೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಹಿಂದೂಗಳೆಲ್ಲ ರಸ್ತೆಗಿಳಿಯಬೇಕಾಗುತ್ತದೆ. ಮುಸ್ಲಿಂ ಓಲೈಕೆ ಮಾಡಿ, ಸಾವಿರಾರು ಕೋಟಿ ಕೊಡಿ. ಆದರೆ ಹಿಂದೂಗಳಿಗೆ ಕೊಡೋ ದುಡ್ಡಿಗೇಕೆ ಕತ್ತರಿ? ಪ್ರವಾಸೋದ್ಯಮ ಇಲಾಖೆಯಿಂದ ನಡೆಯುತ್ತಿದ್ದ ಅಭಿವೃದ್ಧಿಯೇಕೆ ನಿಲ್ಲಿಸುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ.