ಡೆಂಗ್ಯೂಗೆ ನಿಖರವಾದ ಚಿಕಿತ್ಸೆ ಅನ್ನೋದು ಇಲ್ಲ ಇದರ ಜೊತೆಗೆ ಇತರ ಕಾಯಿಲೆಗಳು ಬರುತ್ತವೆ. ಕೋವಿಡ್ ಅನ್ನು ಪ್ಯಾಂಡಮಿಕ್ ಕಾಯಿಲೆ ಎಂದೆವು. ಇದು ಎಂಡಮೆಕ್ ಕಾಯಿಲೆ. ಕೋವಿಡ್ ಮಾದರಿಯಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕು. ಮೆಡಿಕಲ್ ಎಮರ್ಜೆನ್ಸಿ ಎಂದು ಘೋಷಣೆ ಮಾಡಬೇಕು ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಅವರು ಡೆಂಗ್ಯೂ ಜ್ವರದ ನಿಯಂತ್ರಣ ಅಂದ್ರೆ ಸೊಳ್ಳೆಯ ನಿಯಂತ್ರಣ. ಸೊಳ್ಳೆ ನಿಯಂತ್ರಣವಾದ್ರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲದ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಇದು. ಡೆಂಗ್ಯೂ ತಡೆಗಟ್ಟದಿದ್ರೆ ಚಿಕನ್ ಗುನ್ಯಾ, ಝಿಕಾ ವೈರಸ್ ಬರಬಹುದು ಎಂದು ಎಚ್ಚರಿಸಿದ್ದಾರೆ.
ಡಾ.ಸಿ.ಎನ್ ಮಂಜುನಾಥ್ ಅವರು ಡೆಂಗ್ಯೂ ರಾಜ್ಯಾದ್ಯಂತ ಹರಡಿರುವುದರಿಂದ ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿದೆ. ಇದಕ್ಕಾಗಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ನಿಯಂತ್ರಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ. ಲ್ಯಾಬ್ ಗಳು ಹೆಚ್ಚು ಹಣ ವಸೂಲಿ ಮಾಡಿದ್ರೆ ಅವುಗಳ ಬಾಗಿಲು ಮುಚ್ಚಿಸಬೇಕು ಎಂದಿದ್ದಾರೆ.