ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಏರಿಕೆ ಕಾಣುತ್ತಿವೆ. ಡೆಂಘೀಗೆ ಕಡಿವಾಣ ಹಾಕಲು ಮನೆ ಮನೆ ಸರ್ವೇ ಮಾಡುತ್ತೇವೆ ಎಂದು ಹೊರಟಿದ್ದ ಬಿಬಿಎಂಪಿ, ಇದೀಗ ಇದರ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ಮುಂದಾಗಿದೆ. ರೀಲ್ಸ್ ಪ್ರಿಯರಿಗೆ BBMP ಭರ್ಜರಿ ಆಫರ್ ನೀಡಿದ್ದು, ರೀಲ್ಸ್ ಮಾಡಿ ಒಂದು ಲಕ್ಷ ಗೆಲ್ಲಿ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಆಹ್ವಾನಿಸಿದೆ.
ಡೆಂಘೀ ಹೆಚ್ಚಳ ಹಿನ್ನೆಲೆ ರೀಲ್ಸ್ ಮೂಲಕ ಡೆಂಘೀ ವಾರಿಯರ್ ಆಗಲು BBMP ಅವಕಾಶ ಕಲ್ಪಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಡೆಂಘೀ ಕುರಿತ ರೀಲ್ಸ್ ಗಳನ್ನು ಆಹ್ವಾನಿಸಿರುವ ಪಾಲಿಕೆ, ಮೊದಲ ಐದು ಉತ್ತಮ ರೀಲ್ಸ್ಗಳಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೂ ಬಿಬಿಎಂಪಿ ಬಂಪರ್ ಆಫರ್ ಕೊಟ್ಟಿದ್ದು, ಯಾವ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ 35 ಸಾವಿರ ರೂಪಾಯಿ ಬಹುಮಾನದ ಆಫರ್ ಕೊಟ್ಟಿದೆ. ಡೆಂಘೀ ಜಾಗೃತಿ ಸಂಬಂಧ ರೀಲ್ಸ್ ಮಾಡಿದ ನಂತರ ಅದನ್ನು BBMP ಆರೋಗ್ಯ ಇಲಾಖೆ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬೇಕು. ಯಾವ ರೀಲ್ಸ್ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಹೆಚ್ಚು ಮಾಹಿತಿಗಳನ್ನು ಒಳಗೊಂಡಿದೆಯೋ ಅದನ್ನು ಆಧರಿಸಿ ಬಹುಮಾನ BBMP ಬಹುಮಾನ ನೀಡಲಿದೆ.