ಬೆಂಗಳೂರು: ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟಕ್ಕೆ (KMF) ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಇಂದು ಸರ್ಕಾರದಿಂದ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಆಡಳಿತ ಮಂಡಳಿತ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ ಬೆನ್ನ ಹಿಂದೆಯೇ ಇಂದು ಶಿವಲೀಲಾ ಅಧಿಕಾರೇತರ ಸದಸ್ಯರಾಗಿ ನೇಮಕವಾಗಿದ್ದಾರೆ. ಒಕ್ಕೂಟದ ಒಟ್ಟು 9 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆಯಾಗಿದ್ದರು. ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಧಾರವಾಡ ಜಿಲ್ಲೆಯಿಂದ ಶಂಕರ ಮುಗದ, ಗೀತಾ ಸುರೇಶ ಮರಲಿಂಗಣ್ಣವರ, ಸುರೇಶ ಸೋಮಪ್ಪ ಬಣವಿ, ಗದಗ ಜಿಲ್ಲೆಯಿಂದ ನೀಲಕಂಠ ಅಸೂಟಿ, ಲಿಂಗರಾಜಗೌಡ ಹನುಮಂತಗೌಡ ಪಾಟೀಲ, ಉತ್ತರ ಕನ್ನಡ ಜಿಲ್ಲೆಯಿಂದ ಸುರೇಶ್ಚಂದ್ರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ ಹಾಗೂ ಶಂಕರ ಪರಮೇಶ್ವರ ಹೆಗಡೆ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಅವಿರೋಧವಾಗಿ ಆಯ್ಕೆಯಾದ ಹಿರೇಗೌಡರ ಮತ್ತು ಅಸೂಟಿ ಹೊರತುಪಡಿಸಿ ಉಳಿದವರು ಬಿಜೆಪಿ ಬೆಂಬಲಿತರಾಗಿದ್ದಾರೆ.