“ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ಪರಿಹಾರ, ಮನೆಗೆ ನೀರು ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ 10 ಸಾವಿರ ಪರಿಹಾರ, ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಇದರ ಜತೆಗೆ ನಗರದಾದ್ಯಂತ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದ್ದು, ಮಳೆ ನೀರುಗಾಲುವೆಗಳನ್ನು ಸ್ವಚ್ಚಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ವಿಶ್ವಬ್ಯಾಂಕಿನಿಂದ 1 ಸಾವಿರ ಕೋಟಿ ಸಾಲ ಪಡೆದು ಈಗಾಗಲೇ ಕೆಲಸ ಮಾಡಲಾಗುತ್ತಿದೆ” ಎಂದೂ ತಿಳಿಸಿದ್ದಾರೆ.
ಮಳೆಯಿಂದ ಸಮಸ್ಯೆಗೆ ಒಳಗಾಗಿರುವ ಯಲಹಂಕದ ಕೇಂದ್ರಿಯ ವಿಹಾರ ವಸತಿ ಸಮುಚ್ಚಯ, ಬ್ಯಾಟರಾಯನಪುರದ ಮರಿಯಣ್ಣಪಾಳ್ಯ, ಕೆ ಆರ್ ಪುರಂನ ಹೊರಮಾವಿನ ಶ್ರೀ ಸಾಯಿ ಬಡಾವಣೆಗೆ ಶಿವಕುಮಾರ್ ಅವರು ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪರಿಹಾರ ಕಾರ್ಯ ವೀಕ್ಷಣೆ ಜತೆಗೆ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಸದಸ್ಯರ ಜತೆ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದರು. ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿಗಳ ಜೊತೆ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಸ್ಥಳಾಂತರಗೊಂಡ ನಿವಾಸಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.