- ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ನೀಡಲಾಗುವುದು
- ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ
ಬೆಂಗಳೂರು: ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ನೀಡಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರೂ.1 ಲಕ್ಷ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಈ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ, ತಾಲ್ಲೂಕು ಕೇಂದ್ರಗಳಿಗೆ 20 ಸಾವಿರದ ಜೊತೆಗೆ ಹೆಚ್ಚುವರಿಯಾಗಿ 1 ಲಕ್ಷ ನೀಡಲಾಗುವುದು. ಜಿಲ್ಲಾ ಕೇಂದ್ರಗಳಿಗೆ 50 ಸಾವಿರ ನೀಡಲಾಗುತ್ತಿದ್ದು, ಹೆಚ್ಚು ಮಾಡಲು ಚಿಂತನೆ ನಡೆಸಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವನ್ನು ಅರಮನೆ ಮೈದಾನ ಅಥವಾ ಹೊರಾಂಗಣ ಮೈದಾನದಲ್ಲಿ ಜೂನ್ 27 ರಂದು ನಡೆಸಲು ತೀರ್ಮಾನಿಸಲಾಗಿದೆ. ಹುಲಿಯೂರುದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ ಎಂದು ತಿಳಿಸಿದರು.
ಕೆಂಪೇಗೌಡರು ನಿರ್ಮಾಣ ಮಾಡಿದ್ದ ಗೋಪುರಗಳನ್ನು ದಾಟಿ ಬೆಂಗಳೂರು ಮೂರು, ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ. ಬೆಂಗಳೂರು ಇಷ್ಟು ಅಗಾಧವಾಗಿ ಬೆಳೆಯಬಹುದು ಎನ್ನುವ ಕಲ್ಪನೆ ಸ್ವತಃ ಕೆಂಪೇಗೌಡರಿಗೆ ಇರಲಿಲ್ಲ. ಈ ನಗರ ಸ್ಥಾಪಿಸಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಇತರೇ ಸಾಧಕರ ಜಯಂತಿಯಂತೆ ಆಚರಿಸಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೇಂದ್ರ ಸರ್ಕಾರವೇ ಬೆಲೆ ಏರಿಕೆಗೆ ಕಾರಣ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದು, “75 ರೂಪಾಯಿಯಿಂದ 100 ರೂಪಾಯಿಗೆ ಬೆಲೆ ಏರಿಕೆ ಮಾಡಿದ್ದು ಬಿಜೆಪಿಯವರಲ್ಲವೇ. ಇತರೇ ರಾಜ್ಯಗಳಲ್ಲಿ ನಮಗಿಂತಲೂ ಹೆಚ್ಚು ಬೆಲೆಯಿದೆ. ಮಹಾರಾಷ್ಟ್ರ, ರಾಜಸ್ಥಾನದಲ್ಲಿ 104, ಬಿಹಾರದಲ್ಲಿ 107 ರೂ ಬೆಲೆಯಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡಿರುವುದೇ ಬೆಲೆ ಏರಿಕೆಗೆ ಕಾರಣ” ಎಂದು ತಿರುಗೇಟು ನೀಡಿದರು.
ನೀಟ್ ಮರು ಪರೀಕ್ಷೆ ನಡೆಸಿ
ನೀಟ್ ಅಕ್ರಮದ ಬಗ್ಗೆ ಕೇಳಿದಾಗ “ಕರ್ನಾಟಕ ಸರ್ಕಾರ ನೀಟ್ ವಿರುದ್ದವಿದೆ. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳ ಜೊತೆ ನಾವಿದ್ದೇವೆ. ಕೇವಲ 1,563 ವಿದ್ಯಾರ್ಥಿಗಳಿಗೆ ಮಾತ್ರ ಮರು ಪರೀಕ್ಷೆ ನಡೆಸದೆ ಇಡೀ ದೇಶದಾದ್ಯಂತ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು” ಎಂದು ಆಗ್ರಹಿಸಿದರು.