ಕರ್ನಾಟಕ ಅರಣ್ಯ ಇಲಾಖೆಯು ಆಗಸ್ಟ್ 12ರಂದು ವಿಶ್ವ ಆನೆ ದಿನದ ಪ್ರಯುಕ್ತ ಮಾನವ- ಆನೆ ಸಂಘರ್ಷ ಕುರಿತಂತೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ಸಮ್ಮೇಳನವನ್ನು ಆಯೋಜಿಸಿದೆ. ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಒಂದು ದಿನದ ಸಮ್ಮೇಳನದಲ್ಲಿ ಅಮೆರಿಕಾ, ಜರ್ಮನಿ, ಜಪಾನ್, ಯುಕೆ ಸೇರಿದಂತೆ 11 ರಾಷ್ಟ್ರಗಳ ಸುಮಾರು 17ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ. ಯಾವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳಲು ಈ ಸಮ್ಮೇಳನ ಸಹಕಾರಿ ಎಂದು ತಿಳಿಸಿದರು.