ಬೆಂಗಳೂರು: ಬೆಂಗಳೂರಿಗೆ ಬಂದಾಗಲೆಲ್ಲಾ ಎಚ್.ಎಂ.ಟಿ., ಕೆ.ಐ.ಓ.ಸಿ.ಎಲ್. ಬಗ್ಗೆ ಮಾತನಾಡುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 10 ವರ್ಷವಾದರೂ ಆರಂಭವೇ ಆಗದ ಎನ್.ಎಂ.ಡಿ.ಸಿ. ಉಕ್ಕು ಕಾರ್ಖಾನೆ, ಪುನಶ್ಚೇತನ ಆಗದ ವಿಐಎಸ್ಎಲ್ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.
ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (ಹೆಚ್ ಎಂಟಿ) ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (ಕೆಐಒಸಿಎಲ್) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಸಿ ಸುಳ್ಳು ಹೇಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಚ್.ಎಂ.ಟಿ. ಭೂಮಿ ಡಿನೋಟಿಫಿಕೇಷನ್ ಆಗಿಲ್ಲ ಎಂಬುದು ಸುಳ್ಳೆ? ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಭೂಮಿ ಅರಣ್ಯವಾಗೇ ಉಳಿಯುತ್ತದೆ ಎಂಬುದು ಸುಳ್ಳೇ? ಎಚ್.ಎಂ.ಟಿ. 300 ಕೋಟಿ ರೂ.ಗೆ 165 ಎಕರೆ ಅರಣ್ಯ ಭೂಮಿ ಮಾರಾಟ ಮಾಡಿರುವುದು ಸುಳ್ಳೇ? ಕೆ.ಐ.ಓ.ಸಿ.ಎಲ್. ಗಣಿಗಾರಿಕೆ ಮಾಡುವಾಗ ಪರಿಸರವನ್ನು ಹಾಳು ಮಾಡಿರುವುದು ಸುಳ್ಳೇ? ಅರಣ್ಯ ಇಲಾಖೆಗೆ ಕೆ.ಐ.ಓ.ಸಿ.ಎಲ್. ಭೂಮಿಯನ್ನು ಹಸ್ತಾಂತರ ಮಾಡದಿರುವುದು ಸುಳ್ಳೇ? ದೇವದಾರಿ ಗಣಿಗೆ ಅರಣ್ಯ ಭೂಮಿ ನೀಡಬಾರದು ಎಂದು ಅರಣ್ಯ ಇಲಾಖೆ 2020ರ ಜನವರಿ 16ರಂದು ಶಿಫಾರಸ್ಸು ಮಾಡಿರುವುದು ಸುಳ್ಳೆ? ಅರಣ್ಯ ಇಲಾಖೆಯ ವಿರೋಧವಿದ್ದರೂ, ಅಂದಿನ ಬಿಜೆಪಿ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವಂತೆ 2020ರ ಅಕ್ಟೋಬರ್ 9ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸುಳ್ಳೆ? ಅರಣ್ಯ ಇಲಾಖೆಯ ಪ್ರತಿರೋಧವಿದ್ದ ಗಣಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ 2021 ಆಗಸ್ಟ್ 13ರಂದು ಅನುಮತಿ ನೀಡಿದ್ದು ಸುಳ್ಳೆ? ಯಾವುದು ಹಸಿಸುಳ್ಳು ಎಂದು ಪ್ರಶ್ನಿಸಿದ್ದಾರೆ.
ಕೆ.ಐ.ಓ.ಸಿ.ಎಲ್.ನ 300 ಹೊರಗುತ್ತಿಗೆ ನೌಕರರ ಉದ್ಯೋಗದ ಬಗ್ಗೆ ಮಾತನಾಡುವ ಕುಮಾರ ಸ್ವಾಮಿ, 50 ಸಾವಿರ ಉದ್ಯೋಗ ಸೃಷ್ಟಿಸುವ ಮತ್ತು ತಾವೇ ನಿರ್ವಹಿಸುತ್ತಿರುವ ಉಕ್ಕು ಸಚಿವಾಲಯದಡಿ ಬರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್.ಎಂ.ಡಿ.ಸಿ.)ದ ಉಕ್ಕು ಕಾರ್ಖಾನೆ ಸ್ಥಾಪನೆ ಮತ್ತು ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಶ್ಚೇತನದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಎನ್.ಎಂ.ಡಿ.ಸಿ. 2014ರಲ್ಲಿಯೇ ಬಳ್ಳಾರಿ ಜಿಲ್ಲೆಯಲ್ಲಿ ಉಕ್ಕು ಕಾರ್ಖಾನೆ ಆರಂಭಿಸುವುದಾಗಿ ಹೇಳಿ ಸಾವಿರಾರು ಎಕರೆ ಭೂಮಿ ಪಡೆದಿದೆ. 10 ವರ್ಷ ಕಳೆದರೂ ಈ ಕಾರ್ಖಾನೆ ಆರಂಭವೇ ಆಗಿಲ್ಲ. ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RNIL)ಯನ್ನು, ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯ ಮೇರೆಗೆ ಕೇವಲ ನಲವತ್ತೆಂಟು ಗಂಟೆಗಳ ಒಳಗಾಗಿ ಪುನಶ್ಚೇತನ ಮಾಡಿದ್ದಾಗಿ ಅವರು ಹೇಳಿದ್ದಾರೆ.
ಎನ್.ಎಂ.ಡಿ.ಸಿ.ಗೆ ಕೇಂದ್ರ ಹಣಕಾಸು ಸಚಿವರಿಂದ ದುಡಿಯುವ ಬಂಡವಾಳ ಕೊಡಿಸಿ ಉಕ್ಕು ಕಾರ್ಖಾನೆ ಆರಂಭಿಸಿದರೆ 50 ಸಾವಿರ ಜನರಿಗೆ ಉದ್ಯೋಗ ಕೊಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಳ್ಳಾರಿ ಬಳಿ ವೇಣಿವೀರಾಪುರದಲ್ಲಿ 2857.54 ಎಕರೆ ಜಮೀನನ್ನು 2014ರಲ್ಲೇ ರಾಜ್ಯ ಸರ್ಕಾರ ಎನ್.ಎಂ.ಡಿ.ಸಿ.ಗೆ ನೀಡಿದೆ. ಭೂ ಸ್ವಾಧೀನಪತ್ರ ದೊರೆತ 5 ವರ್ಷದಲ್ಲಿ ಉಕ್ಕು ಕಾರ್ಖಾನೆ ಆರಂಭವಾಗಬೇಕಿತ್ತು, ಆದರೆ ದಶಕ ಕಳೆದರೂ ಏಕೆ ಕಾರ್ಖಾನೆ ಆರಂಭ ಆಗಿಲ್ಲ. ಇತ್ತ ಈ ಭೂಮಿಯಲ್ಲಿ ರೈತರು ಬೆಳೆಯೂ ಬೆಳೆಯದಂತೆ ಆಗಿದೆ. ಸಾಗುವಳಿ ಮಾಡಲಾಗದೆ, ಕೆಲಸವೂ ಸಿಗದೆ ಸಂಕಷ್ಟದಲ್ಲಿರುವ ರೈತರ ಪರವಾಗಿ ಕುಮಾರಸ್ವಾಮಿ ಮಾತನಾಡಲಿ ಎಂದು ಅರಣ್ಯ ಸಚಿವರು ಹೇಳಿದ್ದಾರೆ.