ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್/ಬ್ಯಾನರ್ ಗಳ ನಿಯಂತ್ರಣಕ್ಕಾಗಿ ಎಸ್.ಒ.ಪಿ ಹೊರಡಿಸಲಾಗುವುದೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್ಗಳ ನಿಯಂತ್ರಣಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಜೊತೆ ಇಂದು ಪೊಲೀಸ್ ಅಧಿಕಾರಿ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದು, ನಗರದಲ್ಲಿ ಅನಧಿಕೃವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್ ಗಳ ನಿಯಂತ್ರಣಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಸೂಕ್ತವಾದ ಪ್ರಮಾಣಿತ ಕಾರ್ಯಾಚರಣೆಯ ವಿಧಾನ(SOP)ವನ್ನು ಹೊರಡಿಸಲಾಗುವುದು. ಅದರಂತೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅನಧಿಕೃತ ಜಾಹೀರಾತುಗಳು ಅಳವಡಿಸುವುದನ್ನು ಪರಣಾವಕಾರಿಯಾಗಿ ನಿಯಂತ್ರಿಸಲು ನಿರ್ದೇಶನ ನೀಡಿದರು.
ಫ್ಲೆಕ್ಸ್/ಬ್ಯಾನರ್ ಫ್ರಿಂಟಿಂಗ್ ಯುನಿಟ್ಸ್ ಗಳಿಗೆ ಎಚ್ಚರಿಕೆ
ಪಾಲಿಕೆ ವ್ಯಾಪ್ತಿಯ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಫ್ರಿಂಟಿಂಗ್ ಯುನಿಟ್ಸ್ ಗಳ ಪಟ್ಟಿ ಮಾಡಿಕೊಂಡು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಸಹಯೋಗದೊಂದಿಗೆ ಎಲ್ಲಾ ಫ್ರಿಂಟಿಂಗ್ ಯುನಿಟ್ಸ್ ಗಳಿಗೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ಅನಧಿಕೃತ ಜಾಹೀರಾತುಗಳನ್ನು ಮುದ್ರಿಸದಂತೆ ಎಚ್ಚರಿಕೆ ನೀಡಬೇಕು. ಪಾಲಿಕೆಯಿಂದ ಅನುಮತಿಯಿಲ್ಲದೆ ಯಾವದೇ ಅನಧಿಕೃತ ಜಾಹೀರಾತುಗಳನ್ನು ಮುದ್ರಿಸಿದಲ್ಲಿ ಅದನ್ನು ವಶಪಡಿಸಿಕೊಂಡು, ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.