- ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲ
- ಪ್ರಕರಣದ ತಪ್ಪಿತಸ್ಥರು ಯಾವುದೇ ಪಕ್ಷದಲ್ಲಿದ್ದರು ತಪ್ಪಿತಸ್ಥರೇ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.
ಬೆಂಗಳೂರು ಮಾತನಾಡಿದ ಅವರು, ಪ್ರಕರಣದ ತಪ್ಪಿತಸ್ಥರು ಯಾವುದೇ ಪಕ್ಷದಲ್ಲಿದ್ದರು ತಪ್ಪಿತಸ್ಥರೇ ಆಗಿರುತ್ತಾರೆ. ಬೇರೆ ಪಕ್ಷದಲ್ಲಿದ್ದಾರೆ ಎಂಬುದನ್ನು ಮುಖ್ಯವಾಗಿ ತೆಗೆದುಕೊಳ್ಳುವುದಿಲ್ಲ. ಏನು ತಪ್ಪು ಮಾಡಿದ್ದಾರೆ ಎಂಬ ಆಧಾರದ ಮೇಲೆ ತನಿಖೆ, ವಿಚಾರಣೆ ನಡೆಯುತ್ತದೆ ಎಂದು ಹೇಳಿದರು.
ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ನನ್ನು ವಿಚಾರಣೆ ನಡೆಸಲು ಇನ್ನೊಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಕೇಳಿದ್ದರು. ಆದರೆ ಎರಡು ದಿನ ಕಸ್ಟಡಿಗೆ ನೀಡಿದೆ. ಎರಡು ದಿನದ ಬಳಿಕ ವಿಚಾರಣೆ ಮುಗಿದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು.
ರೇಣುಕಾಸ್ವಾಮಿ ಪ್ರಕರಣದ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ವಿಚಾರದಲ್ಲಿ ಯಾರು ನನ್ನ ಬಳಿ ಬರಬೇಡಿ ಎಂದು ಮುಖ್ಯಮಂತ್ರಿಯವರ ಸೂಚಿಸಿದ್ದಾರೆ ಎಂಬುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಅಧಿಕಾರಿಗಳು ಮಾಹಿತಿ ನೀಡಲು ಹೋಗುವುದನ್ನು ಹೊರತುಪಡಿಸಿ, ಯಾರು ಹೋಗಲ್ಲ. ಅದರ ಅವಶ್ಯಕತೆಯು ಯಾರಿಗೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ನನ್ನ ಬಳಿ ಬಂದಿಲ್ಲ ಎಂದರು.
ಜೈಲಿನಲ್ಲಿ ದುಡ್ಡು ಎಲ್ಲ ಸೌಲಭ್ಯಗಳು ಸಿಗುತ್ತವೆ. ನಟ ದರ್ಶನ ಜೈಲಿಗೆ ಬೇರೆ ರೀತಿಯಲ್ಲಿ ಟ್ರೀಟ್ ಮಾಡಲಾಗುತ್ತದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಕೆಲವು ಸಂದರ್ಭದಲ್ಲಿ ಸತ್ಯ ಇರಬಹುದು. ಜೈಲುಗಳ ಮೇಲೆ ದಾಳಿ ನಡೆದಾಗ ಫೋನ್ ಸೇರಿದಂತೆ ಬೇರೆಬೇರೆ ವಸ್ತುಗಳು ಸಿಕ್ಕಿವೆ. ಅಧಿಕಾರಿಗಳ ಕಣ್ತಪ್ಪಿಸಿ ನಡೆದಿರುತ್ತದೆ. ಜೈಲ್ ಅಧಿಕಾರಿಗಳು ನಿಗಾವಹಿಸುತ್ತಾರೆ. ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದರು.