ಬೆಂಗಳೂರು, ಅ.26,2024: ದುಡ್ಡಿನ ಕಂತೆಯನ್ನು ಕೂಡಿಡುವುದು ಉಳಿತಾಯವಲ್ಲ, ವಿವಿದೆಡೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಜಾಣ್ಮೆ ರೂಢಿಸಿಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸಲಹೆ ನೀಡಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಶನಿವಾರ ಆಯೋಜಿಸಿದ್ದ ಹಣಕಾಸಿನ ಶಿಸ್ತು ಕುರಿತ ಕಾರ್ಯಾಗಾರ ಉದ್ಘಾಟನೆ ನಂತರ ಮಾತನಾಡಿದ ಅವರು, “ಎಲ್ಲರೂ ಅದರಲ್ಲೂ ವಿಶೇಷವಾಗಿ ನಮ್ಮ ಹೆಣ್ಣು ಮಕ್ಕಳು ಹಣದ ಉಳಿತಾಯಕ್ಕೆ ಒತ್ತು ನೀಡಬೇಕು. ದುಡ್ಡಿನ ಕಂತೆಯನ್ನು ಕೂಡಿಡುವುದಕ್ಕಿಂತ ಹಲವು ಕ್ಷೇತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು,”ಎಂದರು.
“ಉಳಿತಾಯದ ಹಣ ನಮ್ಮ ವೃದ್ಧಾಪ್ಯದಲ್ಲಿ ಅನುಕೂಲಕ್ಕೆ ಬರುವಂತೆ ಹೂಡಿಕೆ ಮಾಡಬೇಕು. ಪಿಪಿಎಫ್, ಭೂಮಿ, ಚಿನ್ನ, ಷೇರು, ಮ್ಯೂಚಯಲ್ ಫಂಡ್, ವಿಮೆ ಮುಂತಾದ ಹಲವು ರೂಪದಲ್ಲಿ ನಮ್ಮ ಹಣದ ಹೂಡಿಕೆ ಮಾಡುವುದು ಬಹಳ ಮುಖ್ಯ. ದುಡಿದ ಹಣವನ್ನು ಒಂದೇ ಕಡೆ ಹಾಕಿ ಆರ್ಥಿಕ ನಷ್ಟ ಎದುರಿಸುವಂತಾಗಬಾರದು. ಜಾಣ್ಮೆಯಿಂದ ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಾನಾ ಮೂಲಗಳಿಂದ ಆದಾಯ ಪಡೆಯಬಹುದು,”ಎಂದರು.
“ಸುದ್ದಿಗಾಗಿ ಹಗಲಿರುಳು ದುಡಿಯುವ ಪತ್ರಕರ್ತರು ಅದರಲ್ಲೂ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಹೆಣ್ಣು ಮಕ್ಕಳ ಬಗ್ಗೆ ನನಗೆ ವಿಶೇಷ ಗೌರವವಿದೆ. ಸರ್ಕಾರಿ ಅಧಿಕಾರಿಗಳಂತೆ ಪತ್ರಕರ್ತರಿಗೆ ಕೆಲಸದ ಭದ್ರತೆ, ಪಿಂಚಣಿಯಂಥ ಸವಲತ್ತುಗಳು ಇರುವುದಿಲ್ಲ. ಹಾಗಾಗಿ, ಆರ್ಥಿಕ ಶಿಸ್ತು ರೂಢಸಿಕೊಂಡಾಗ ಮಾತ್ರ ಆರ್ಥಿಕ ಭದ್ರತೆ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಲೇಬೇಕು. ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನಕೊಡಲೇ ಬೇಕು. ಅದಕ್ಕಾಗಿಯೂ ಒಂದಿಷ್ಟು ಹಣ ವಿನಿಯೋಗಿಸಬೇಕು. ದುಡಿದ ಅಷ್ಟೂ ಹಣವನ್ನು ಕೇವಲ ಉಳಿತಾಯ ಮಾಡುವ ಬದಲು ನಮ್ಮ ಖುಷಿ ಹಾಗೂ ಆರೋಗ್ಯ ವೃದ್ಧಿಗೆ ಬಳಸಿಕೊಳ್ಳಬೇಕು. ಆಗ ನಮ್ಮ ದುಡಿಮೆ ಸಾರ್ಥಕವಾಗುತ್ತದೆ,” ಎಂದು ಹೇಳಿದರು.
“ಕಲಿಕೆಯ ಹಸಿವು ಇರಬೇಕು, ಹೊಸದನ್ನು ಮೈಗೂಡಿಸಿಕೊಳ್ಳುವ ಮನಸ್ಸಿರಬೇಕು ಆಗಷ್ಟೇ ವೃತ್ತಿ ಜೀವನದಲ್ಲಿ ಅಪ್ಡೇಟ್ ಆಗಲು ಸಾಧ್ಯ. ಏನನ್ನಾದರೂ ಸಾಧಿಸಬೇಕಾದರೆ ಮೊದಲು ಗುರಿ ಇಟ್ಟುಕೊಳ್ಳಬೇಕು, ಅದನ್ನು ತಲುಪಲು ಸತತ ಪ್ರಯತ್ನ ಇರಬೇಕು. ಅದಕ್ಕೆ “ಕಂಫರ್ಟ್ ಝೋನ್” ನಿಂದ ಆಚೆ ಬರಬೇಕು. ಆಗಲೇ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಇದೆಲ್ಲದರ ಜತೆಗೆ ಸಹಾಯದ ಅವಶ್ಯಕತೆ ಇದ್ದಾಗ ಮಹಿಳೆಯರು ಹಿಂದೇಟು ಹಾಕದೇ ಕೇಳಬೇಕು. ಸಲಹೆ, ಸಹಕಾರ ಕೇಳಿ ನಮ್ಮ ಗುರಿ ಸಾಧಿಸಬೇಕು. ಅದಕ್ಕಾಗಿ ಮಹಿಳೆಯರು ತಮ್ಮ ನೆಟ್ವರ್ಕ್ ವಿಸ್ತರಿಸಿಕೊಳ್ಳಬೇಕು,” ಎಂದರು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಶರತ್ ಎಂ. ಎಸ್. ಹಾಗೂ ಅಭಿಷೇಕ ರಾಮಪ್ಪ ಕಾರ್ಯಗಾರವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಆರ್ಥಿಕ ಸಾಕ್ಷರತೆ ಮಹತ್ವವನ್ನು ಎಳೆ ಎಳೆಯಾಗಿ ಹಂಚಿಕೊಂಡಿರು. ನಾವು ದುಡಿದ ದುಡ್ಡನ್ನು ದುಡಿಸುವುದು ಹೇಗೆ ಅಥವಾ ಎರಡನೇ ಆದಾಯ ಹೇಗಿರಬೇಕು? ಮೊದಲನೇ ಆದಾಯದಿಂದ ಉಳಿತಾಯ ಹೇಗೆ ಮಾಡಬೇಕು? ಉಳಿತಾಯದಿಂದ ಹೂಡಿಕೆ ಎಡೆಗೆ ಹೋಗೋದು ಹೇಗೆ? ಹೂಡಿಕೆ ವೇಳೆ ತಾಳ್ಮೆ ಎಷ್ಟಿರಬೇಕು ಎನ್ನುವುದನ್ನು ಎಂ ಎಸ್ ಶರತ್ ಸಂಕ್ಷಿಪ್ತವಾಗಿ ವಿವರಿಸಿದರು.
ಇನ್ನು ವೃದ್ಧಾಪ್ಯ ಜೀವನಕ್ಕೆ ಬೇಕಾದ ದುಡ್ಡನ್ನು ಹೇಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕು? ಆ ಸಮಯದಲ್ಲಿ ದುಡ್ಡಿನ ತೊಂದರೆ ಇಲ್ಲದೆ ಜೀವನ ಸಾಗಿಸುವುದು ಹೇಗೆ ? ಅದಕ್ಕಾಗಿ ಈಗನಿಂದಲೇ ಉಳಿತಾಯ ಮಾಡುವುದು ಹೇಗೆ ಎಂಬ ಬಗ್ಗೆ ಅಭಿಷೇಕ ರಾಮಪ್ಪ ವಿವರಿಸಿದರು.