- ನನ್ನ ಮುಗಿಸುವ ಕೆಲ ನಾಯಕರು ಪ್ರಯತ್ನ ಮಾಡ್ತಿದ್ದಾರೆ
- ನನಗೆ ಬೇಕಾಗಿರುವು ರಾಜ್ಯದ ಅಭಿವೃದ್ಧಿ ಅಷ್ಟೇ
ನನ್ನ ವಿಚಾರದಲ್ಲೂ ನನ್ನ ಮುಗಿಸಲು ಕೆಲ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ, ಮಾಡ್ಲಿ ಪಾಪ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಸಚಿವರಾಗಿ ವಾರದ ಬಳಿಕ ಇಂದು ಬೆಂಗಳೂರಿಗೆ ಹೆಚ್ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೇಸ್ ಇದೆಯಾ ಅಂತಾ ಚೆಕ್ ಮಾಡ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿನ ಹೇಗೆ ಮುಗಿಸಿಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಮುಗಿಸಿದ್ದೇವೆ ಅಂತಾ ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ ಎಂದು ಹೇಳಿದ್ದಾರೆ.
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಗೆ ಶಾಮಿಯಾನ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇತಿಹಾಸದಲ್ಲಿ ಈ ರೀತಿ ಘಟನೆ ಯಾವತ್ತೂ ನಾನು ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಸರಿಪಡಿಸಿಕೊಳ್ಳಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿದ್ದು, ಸರ್ಕಾರದ 4 ತಿಂಗಳ ನಡುವಳಿಕೆ ಮೇಲೆ ಅನುಮಾನ ಪಡಬೇಕು. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಜನರಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಲ್ಕು ತಿಂಗಳ ನಂತರ ಈ ಕೇಸ್ ಕೆದಕಿದ್ದಾರೆ ಎಂದು ಹೇಳಿದ್ದಾರೆ.