ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ನಡಿತ್ತಿದೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ ಲೂಟಿ ಬೆಂಗಳೂರು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ – ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಎರಡು ದಿನ ಮಳೆಯಿಂದ ಜನರು ಬೀದಿಗೆ ಬಂದಿದ್ದಾರೆ. ಬೆಂಗಳೂರಿಗೆ ಒಂದು ವರ್ಷದಲ್ಲಿ ಇವರ ಕೊಡುಗೆ ಏನು?. ಐದು ಕೆಜಿ ಅಕ್ಕಿ ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಮಿಕ್ಕಿದ್ದ ಐದು ಕೆಜಿ ಅಕ್ಕಿಯ ಹಣ ಕೊಟ್ಟಿಲ್ಲ. 70% ಬೀಜದ ಬೆಲೆ ಏರಿಕೆ ಮಾಡಿದ್ದಾರೆ, ಗೊಬ್ಬರ ಸಿಗುತ್ತಿಲ್ಲ. ರಾಜ್ಯದಲ್ಲಿ ಯಾವ ರೀತಿ ಕೆಲಸ ಆಗುತ್ತಿದೆ ಗೊತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ನಾಯಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದು, ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ನಾಯಕರು ಮೈ ಮರೆಯಬಾರದು. ಅದರಲ್ಲಿಯೂ ಈ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದು, ಕಾಂಗ್ರೆಸ್ ನವರು ಈಗಾಗಲೇ ಹಣದ ಹೊಳೆ ಹರಿಸಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರ ಸಹಕಾರ ನಮಗೆ ಬಹಳ ಮುಖ್ಯವಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಸಲ ಮಾಡೋಣ ಎಂದರು.