ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ನೊಟೀಸ್ ನೀಡಿದ ಹಿನ್ನೆಲೆ ಇಂದು ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಸಚಿವ ಸಂಪುಟ ಸಭೆ ಮುಗಿದ ಬಳಿಕ ನೇರವಾಗಿ ಲೋಕಾಯುಕ ಕಚೇರಿಗೆ ಬಂದ ಅವರು ಪ್ರಕರಣ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಎಂ.ಎಚ್.ಸತೀಶ್ ಅವರ ಮುಂದೆ ವಿಚಾರಣೆಗೆ ಎದುರಿಸಿದ್ದಾರೆ.
2013 ರಿಂದ 2018 ರವರೆಗೆ 74.93 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಆರೋಪ ಸಂಬಂಧ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ರದ್ದುಪಡಿಸಿದ್ದ ರಾಜ್ಯ ಸರ್ಕಾರವು ಬಳಿಕ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ವಹಿಸಿತ್ತು. ಅಕ್ರಮ ಆಸ್ತಿ ಗಳಿಕೆ ಸಂಬಂಧ ಈ ಹಿಂದೆ ಸಿಬಿಐ ತನಿಖಾಧಿಕಾರಿಗಳಿಗೆ ಒದಗಿಸಿದ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದಿದ್ದ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇಂದು ವಿಚಾರಣೆ ಹಾಜರಾಗುವಂತೆ ಡಿಕೆ ಶಿವಕುಮಾರ್ ಅವರಿಗೆ ನೊಟೀಸ್ ಜಾರಿ ಮಾಡಿದ್ದರು.
ಶಿವಕುಮಾರ್ ಅವರು ಏಪ್ರಿಲ್ 1, 2013 ರಿಂದ ಏಪ್ರಿಲ್ 30, 2018 ರ ಅವಧಿಯಲ್ಲಿ ಆದಾಯಕ್ಕೆ ಅಸಮಾನವಾಗಿ 74.93 ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಸಿಬಿಐ ಹೇಳಿತ್ತು. ಈ ಸಂಬಂಧ 2019 ರ ಸೆಪ್ಟೆಂಬರ್ 9 ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ತನಿಖೆ ನಡೆಸಲು ಅಂದಿನ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿ ರದ್ದುಪಡಿಸಿ ಆದೇಶಿಸಿತ್ತು.