ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಇನ್ಫಾರ್ಮೇಷನ್ ಟೆಕ್ನಾಲಾಜಿ ಸಂಸ್ಥೆ ಐಐಐಟಿ-ಬಿ ನಿನ್ನೆ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯ್ತು, ಇಲ್ಲಿ ಅಮ್ಮ ಮಗ ಇಬ್ಬರೂ ಒಂದೇ ವೇದಿಕೆಯಲ್ಲಿ ತಮ್ಮ ಶೈಕ್ಷಣಿಕ ಡಿಗ್ರಿ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. 48 ವರ್ಷ ಪ್ರಾಯದ ಅಮ್ಮ ರಂಜನಿ ನಿರಂಜನ್ ಅವರು ಪಿಹೆಚ್ಡಿ ಡಿಗ್ರಿ ಪಡೆದರೆ ಅವರ 22 ವರ್ಷದ ಮಗ ರಾಘವ ಎಸ್ಎನ್ ಅವರು ಇಂಟಿಗ್ರೇಟೆಡ್ ಎಂ ಟೆಕ್ ಪದವಿಯನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿದರು.
ತಮ್ಮ ಈ ಬದುಕಿನ ಈ ವಿಶೇಷ ಕ್ಷಣದ ಬಗ್ಗೆ ಮಾತನಾಡಿದ ತಾಯಿ ರಂಜನಿ, ಮಗ ರಾಘವ್ ಜೊತೆಗೇ ತನ್ನ ಪಿಹೆಚ್ಡಿ ಡಿಗ್ರಿ ಪಡೆಯುತ್ತಿರುವುದಕ್ಕ ಖುಷಿಯಾಗುತ್ತಿದೆ. ನಮ್ಮ ಕುಟುಂಬದಲ್ಲಿ ಇದೊಂದು ಗಮನಾರ್ಹ ಸಾಧನೆ. ಪ್ರತಿಯೊಬ್ಬರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಈ ವಿಚಾರಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ನನಗಿಂತ 13 ವರ್ಷ ಚಿಕ್ಕವರಾದ ವಿದ್ಯಾರ್ಥಿಗಳ ಜೊತೆ ಕ್ಲಾಸ್ರೂಮ್ನಲ್ಲಿ ಕುಳಿತಿರುತ್ತಿದ್ದೆ, ಮೊದಮೊದಲೆಲ್ಲಾ ಇದೊಂದು ಸವಾಲಾಗಿತ್ತು. ಇದು ಕೇವಲ ಸಮಯದ ವಿಚಾರ, ದಿನದ ಕೊನೆಯಲ್ಲಿ ನಾವೆಲ್ಲರೂ ಕಲಿಯುವವರೇ ಆಗಿದ್ದೇವೆ ಎಂದು ರಂಜನಿ ನಿರಂಜನ್ ಹೇಳಿದ್ದಾರೆ.
ಇತ್ತ ಅಮ್ಮನೊಂದಿಗೆ ಪದವಿ ಪಡೆದ ಖುಷಿಯಲ್ಲಿದ್ದ ಮಗ ರಾಘವ್ ಮಾತನಾಡಿ, ನಾನು ನನ್ನ ತಾಯಿಗೆ ಕಲಿಸುವ ವೇಳೆ ಕೆಲವು ಬಾರಿ ಪಾತ್ರಗಳು ಹೇಗೆ ವ್ಯತಿರಿಕ್ತವಾಗಿರುತ್ತವೆ ಎಂಬುದನ್ನು ಹೇಳಿಕೊಂಡರು. ಗಣಿತದ ಪ್ರಶ್ನೆಗಳಿಗೆ ಅದರಲ್ಲೂ 12ನೇ ತರಗತಿಯ ಮ್ಯಾಥ್ಸ್ನ ಕೆಲ ಸಮಸ್ಯೆಗಳಿಗೆ ತಾಯಿ ನನ್ನ ಸಹಾಯ ಕೇಳುತ್ತಿದ್ದರು. ಅದು ನನಗೆ ಬಹಳ ರೋಮಾಂಚನಕಾರಿ ಹಾಗೂ ವಿನೋದಮಯವಾಗಿತ್ತು. ಇದು ಅಮ್ಮ ಮಗನ ಪಾತ್ರ ಅದಲೂ ಬದಲಾದಂತಿತ್ತು. ನಾನು ನನ್ನಮ್ಮನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ ಎಂದರು. ಈ ಅಮ್ಮ ಮಗ ಇಬ್ಬರು ಕೂಡ ತಮ್ಮ ಸಾಧನೆಗೆ ಶಕ್ತಿಯಾಗಿ ನಿಂತಿರುವುದಕ್ಕೆ ಗಂಡ ಹಾಗೂ ತಂದೆಗೆ ಕ್ರೆಡಿಟ್ ನೀಡಿದ್ದಾರೆ.