ಆಂಧ್ರಪ್ರದೇಶದ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ್ದು, ರಾಜ್ಯದ ಜನರ ಭಾವನೆಗೆ ಚ್ಯುತಿ ಆಗದಂತೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರ ಮತ್ತು ರಾಜ್ಯದ ಅರಣ್ಯಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಆನೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಂಧ್ರದಲ್ಲಿಯೂ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ಕುರಿತಂತೆ ಚರ್ಚಿಸಲು ಇಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೊನಿಡಲ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಉನ್ನತ ಅರಣ್ಯಾಧಿಕಾರಿಗಳೊಂದಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದರು.
ಸುಮಾರು ಒಂದು ಗಂಟೆಗಳ ಕಾಲ ಎರಡೂ ರಾಜ್ಯಗಳ ಅರಣ್ಯಾಧಿಕಾರಿಗಳೊಂದಿಗೆ ಉತ್ತಮ ಮತ್ತು ಉಪಯುಕ್ತ, ಫಲಪ್ರದವಾದ ಚರ್ಚೆ ನಡೆದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಖಂಡ್ರೆ ತಿಳಿಸಿದರು.
ರಾಜ್ಯ ಇದೇ 12ರಂದು ವಿಶ್ವ ಆನೆಯ ದಿನದಂದು ಮಾನವ- ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಜಿಕೆವಿಕೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನೇ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಉತ್ತಮ ರೂಢಿಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದರು.
ಕರ್ನಾಟಕದಲ್ಲಿ ನಡೆಯುವ ಮೈಸೂರು ದಸರಾ ಮಹೋತ್ಸವದಲ್ಲಿ ಆನೆಗಳೇ ಪ್ರಧಾನ ಆಕರ್ಷಣೆ. ಮೈಸೂರು ದಸರಾದಲ್ಲಿ ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿ ವಿಶ್ವ ವಿಖ್ಯಾತವಾಗಿದೆ. ಇದಕ್ಕಾಗಿ ಆನೆಗಳನ್ನು ಕಾಡಿನಿಂದ ನಾಡಿಗೆ ತರುವ ಗಜ ಪಯಣ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಇದೇ ಆಗಸ್ಟ್ 21ರಂದು ವೀರನಹೊಸಹಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.