ಬೆಂಗಳೂರು: ಸಂಡೂರು ಉಪಚುನಾವಣೆ ಸೋಲಿನ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಶ್ರೀರಾಮುಲು ಮುನಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮೇಲೆ ರಾಮುಲು ಸಿಟ್ಟಿಗೆದ್ದಿದ್ದು, ಬಿಜೆಪಿಗೆ ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೂ ಶ್ರೀರಾಮುಲು ಮುನಿಸಿಕೊಂಡಿದ್ದಾರೆ.
ಶ್ರೀರಾಮುಲು ಅವರ ರಾಜೀನಾಮೆ ಹೇಳಿಕೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಕೂಡ ತಿರುಗೇಟು ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ ಅವರು, ಶ್ರೀರಾಮುಲು ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ. ಆದರೆ ಶ್ರೀರಾಮುಲು ಅವರು ನನ್ನ ಮೇಲೆ ಆರೋಪ ಮಾಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮುಲು ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ಯುವ ಪ್ರಯತ್ನ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ಸೋಲಿಸಲು ಡಿಕೆ ಶಿವಕುಮಾರ್ ಅವರು ಪ್ಲ್ಯಾನ್ ಮಾಡಿದ್ದಾರೆ. ಶ್ರೀರಾಮುಲು ಮೂಲಕ ಜಾರಕಿಹೊಳಿ ಸೋಲಿಸಲು ಡಿಕೆಶಿ ಅವರು ಮುಂದಾಗಿದ್ದಾರೆ ಅನ್ನೋ ಮಾತು ಕೇಳಿದ್ದೇನೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಶ್ರೀರಾಮುಲು ನನಗೆ ಯಾವತ್ತೂ ಸ್ನೇಹಿತನಾಗೇ ಇರುತ್ತಾರೆ. ಒಮ್ಮೆ ನಾನು ಸ್ನೇಹಿತ ಅಂತ ಭಾವಿಸಿದ ಮೇಲೆ ಬದಲಾಯಿಸಲ್ಲ. ಸತೀಶ್ ಜಾರಕಿಹೊಳಿನ ಮಣಿಸಲು ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹೀಗಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೆಳೆಯಲು ಡಿಕೆಶಿ ಪ್ರಯತ್ನಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನಿಂದ ರಾಮುಲು ಅವರನ್ನ ಸೆಳೆಯುವ ಈ ರಾಜಕೀಯ ಚರ್ಚೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ. ನನ್ನನ್ನ ಯಾರೂ ಭೇಟಿ ಮಾಡಿಲ್ಲ, ಎಲ್ಲಾ ಸುಳ್ಳು. ಅವರ ಆಂತರಿಕ ಸಮಸ್ಯೆ, ಅದಕ್ಕೂ ನನಗೂ ಸಂಬಂಧ ಇಲ್ಲ. ಅವರ ಆಂತರಿಕ ಜಗಳ ಅವರೇ ನಮ್ಮ ಪಕ್ಷಕ್ಕೆ ಕಳುಹಿಸಲು ಹೊರಟಿದ್ದಾರೆ ಎಂದು ಉತ್ತರಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc